ಬೆಂಗಳೂರು: ಕನಿಷ್ಠ ವೇತನ ಕಾಯಿದೆ 1948ರ ಉಲ್ಲಂಘನೆ ಅಪರಾಧ ಪ್ರಕರಣಗಳಲ್ಲಿ ಕಂಪನಿಯನ್ನೂ ಸಹ ಅಗತ್ಯ ಪ್ರತಿವಾದಿಯನ್ನಾಗಿ ಮಾಡಬೇಕು ಎಂದು ಹೈಕೋರ್ಟ್ ತಿಳಿಸಿದೆ.
ತಮ್ಮ ವಿರುದ್ಧ ಕ್ರಿಮಿನಲ್ ಕೇಸ್ ರದ್ದು ಕೋರಿ ಬೆಂಗಳೂರಿನ ಪಾದಪಾರ ಪಟ್ಟಿ ಮತ್ತು ಸಮೀರ್ ಸುಲ್ತಾನಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ. ಅಲ್ಲದೆ, ಕಂಪೆನಿಯನ್ನು ಪ್ರತಿವಾದಿಯಾಗಿಸದೆ, ಅದರ ನಿರ್ದೇಶಕರನ್ನು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಡಿಸಲಾಗದು ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ''ಕಾನೂನು ರೀತಿಯಲ್ಲಿ ಕಂಪೆನಿಯ ಕ್ರಿಯೆಗಳಿಗೆ ಕಂಪನಿಯನ್ನು ಮತ್ತು ಅದರ ನಿರ್ದೇಶಕ ಇಬ್ಬರನ್ನೂ ಸಹ ಪಾರ್ಟಿಗಳನ್ನಾಗಿ ಮಾಡಿ ಹೊಣೆಯನ್ನು ನಿಗದಿಪಡಿಸಬೇಕಾಗಿದೆ. ಹಾಗಾಗಿ, ಕಂಪನಿಯನ್ನು ಪ್ರತಿವಾದಿ ಮಾಡದೆ ಅರ್ಜಿದಾರರ ವಿರುದ್ಧ ಹೂಡಿರುವ ಕೇಸು ಊರ್ಜಿತವಾಗುವುದಿಲ್ಲ'' ಎಂದು ನ್ಯಾಯಾಲಯ ಆದೇಶಿಸಿದೆ.
''ಅರ್ಜಿದಾರರು ಅಟಿಕಾ ಗೋಲ್ಡ್ ಕಂಪೆನಿಯಲ್ಲಿ ನಿರ್ದೇಶಕರಾಗಿ ತಮ್ಮ ಹೊಣೆಗಾರಿಕೆ ನಿರ್ವಹಿಸಿದ್ದಾರೆ. ಕಂಪನಿಯ ಪರವಾಗಿ ಅವರು ಕಾರ್ಯನಿರ್ವಹಿಸುತ್ತಿರುವುದರಿಂದ ಮೊದಲು ಕಂಪೆನಿಯನ್ನು ಪ್ರತಿವಾದಿ ಮಾಡಬೇಕಾಗಿದೆ'' ಎಂದು ಆದೇಶದಲ್ಲಿ ತಿಳಿಸಿದೆ.
ಅಟಿಕಾ ಗೋಲ್ಡ್ ಕಂಪೆನಿಯಲ್ಲಿ ಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಾರ್ಮಿಕ ಅಕಾರಿ ಸ್ಥಳೀಯ ನ್ಯಾಯಾಲಯದಲ್ಲಿ ಕನಿಷ್ಠ ವೇತನ ಕಾಯಿದೆ 1948ರ ಸೆಕ್ಷನ್ 25ರ ನಿಯಮ 7, 9 ಹಾಗೂ 21ರಡಿ ಉಲ್ಲಂಘನೆ ಮಾಡಿದ್ದಾರೆಂದು ನಿರ್ದೇಶಕರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಸ್ವೀಕರಿಸಿದ ನ್ಯಾಯಾಲಯ ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು.
ಆದರೆ, ಅದರಲ್ಲಿ ಕಂಪೆನಿಯನ್ನು ಪ್ರತಿವಾದಿಯನ್ನಾಗಿ ಮಾಡಿರಲಿಲ್ಲ. ಆದ್ದರಿಂದ ಅರ್ಜಿದಾರರು ಕಂಪನಿಯನ್ನು ಪ್ರತಿವಾದಿಯನ್ನಾಗಿ ಮಾಡದೆ, ಅದರಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ. ಹಾಗಾಗಿ, ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಚಾಮರಾಜಪೇಟೆಯಲ್ಲಿದ್ದ ಪಶು ಚಿಕಿತ್ಸಾಲಯ ಸ್ಥಳ ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಕ್ಕೆ ಹೈಕೋರ್ಟ್ ತಡೆ - High Court