ಉಡುಪಿ: ಹವಾಮಾನ ವೈಪರೀತ್ಯದ ನಡುವೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಮಳೆಗಾಲದಲ್ಲಿಯೂ 30 ರಿಂದ 35 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇರುವುದು ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಪದೇ ಪದೇ ಮಳೆ ಸುರಿಯುತ್ತಿರುವುದು ಹಾಗೂ ಕೆಲವೊಮ್ಮೆ ವಿಪರೀತ ಬಿಸಿಲಿನಿಂದ ಜನ ಹೈರಾಣಾಗಿದ್ದಾರೆ. ಉಷ್ಣಾಂಶದಲ್ಲಿ ಬಹಳಷ್ಟು ಏರುಪೇರಾಗುತ್ತಿರುವ ಕಾರಣ ವಿವಿಧ ರೋಗರುಜಿಗಳಿಗೆ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ ಕಂಡು ಬರುತ್ತಿರುವ ನೆಗಡಿ, ಕೆಮ್ಮು, ಜ್ವರ ಲಕ್ಷಣಗಳು ಗುಣಮುಖವಾಗಲು ಕನಿಷ್ಠ ಎಂದರೂ ಒಂದು ವಾರಗಳಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತಿದೆ. ಮುಖ್ಯವಾಗಿ ಡೆಂಗ್ಯೂ, ಇಲಿಜ್ವರ, ಎಚ್1ಎನ್1, ಅತಿಸಾರ ಭೇದಿಯಂತಹ ಲಕ್ಷಣಗಳು ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಜಿಲ್ಲಾಸ್ಪತ್ರೆ ಸಹಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆಯಾದರೂ ಗುಣಮುಖ ಆಗುವುದರಲ್ಲಿ ವಿಳಂಬವಾಗುತ್ತಿರುವ ಕಾರಣ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಶುಚಿತ್ವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ: ಹೆಚ್ಚಾಗಿ ಸೊಳ್ಳೆಗಳು ಇರುವ ಸ್ಥಳ, ಕಾಡು, ಪೊದೆಗಳಿಗೆ ಹೋಗುವ ವೇಳೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯಗತ್ಯ. ಎಲ್ಲೆಂದರಲ್ಲಿ ರೋಗಾಣುಗಳು ಹಾಗೂ ಕ್ರಿಮಿಕೀಟಗಳಿರುವ ಕಾರಣ ಸೋಂಕು ಲಕ್ಷಣಗಳನ್ನು ಉಂಟು ಮಾಡುವ ಸಾಧ್ಯತೆಗಳೂ ಹೆಚ್ಚಳವಾಗಿರುತ್ತದೆ. ಕೈ, ಕಾಲು, ತ್ವಚೆಯಲ್ಲಿ ಫಂಗಲ್ ಇನ್‌ಫೆಕ್ಷನ್ ರೀತಿ ಕಂಡುಬರುತ್ತಿದ್ದು, ಕೆಲವೊಮ್ಮ ನೋವು ಕೂಡ ಕಂಡುಬರುತ್ತದೆ. ಕೀವುಗಳು ಬಾರದಂತೆ ಎಚ್ಚರ ವಹಿಸುವ ಜತೆಗೆ ನೀರನ್ನು ಮುಟ್ಟಿದ ಬಳಿಕ ಶುಭ್ರವಾದ ಬಟ್ಟೆಯಿಂದ ಕೈಕಾಲುಗಳನ್ನು ಒರೆಸಿಕೊಳ್ಳುವುದು ಉತ್ತಮ.
ಹಿಂದೆ ಕಂಡು ಬಂದ ಮಲೇರಿಯಾ ಈಗ ಇಳಿಮುಖ: ಜಿಲ್ಲೆಯಲ್ಲಿ ಮಲೇರಿಯಾ ರೋಗಲಕ್ಷಣಗಳು ಇಳಿಮುಖ ಕಂಡಿವೆ. ಜನವರಿಯಿಂದ ಇದುವರೆಗೆ ಒಟ್ಟು 6 ಪ್ರಕರಣಗಳಷ್ಟೇ ದಾಖಲಾಗಿವೆ. ಆದರೆ ಉಳಿದ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಈಗಾಗಲೇ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿವಿಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಮನೆ ಮನೆ ಭೇಟಿ ನೀಡಿ ವಿವಿಧ ರೀತಿಯ ಲಾರ್ವ ಸರ್ವೇಗಳನ್ನು ನಡೆಸಲಾಗುತ್ತಿದೆ. ಕೋವಿಡ್ ಪ್ರಕರಣಗಳು ಇಳಿಮುಖ ಕಂಡಿದ್ದು, ಕೇವಲ 4 ಪ್ರಕರಣಗಳು ದಾಖಲಾಗಿವೆ. ಒಟ್ಟಿನಲ್ಲಿ ಜಿಲ್ಲೆಯ ಎಲ್ಲ ಮನೆ ಮನೆಗಳ ಸದಸ್ಯರಲ್ಲಿಯೂ ಒಂದೊಂದು ಬಗೆಯ ರೋಗಲಕ್ಷಣಗಳು ಕಂಡುಬರುತ್ತಿವೆ.
ಜಿಲ್ಲೆಯಲ್ಲಿ 2024ರ ಜನವರಿಯಿಂದ ಇದುವರೆಗೆ ದಾಖಲಾದ ರೋಗ ಪ್ರಕರಣಗಳು:
ರೋಗ ಮತ್ತು ಸಂಖ್ಯೆ
- ಅತಿಸಾರಭೇದಿ: 4428
- ಕರುಳುಬೇನೆ: 266
- ಅರಿಶಿನ ಕಾಮಾಲೆ: 74
- ವಿಷಮ ಶೀತ ಜ್ವರ:27
- ಮಲೇರಿಯಾ: 6
- ಡೆಂಗ್ಯೂ: 509
- ದಡಾರ :12
- ಇಲಿಜ್ವರ: 193
- ಕೋವಿಡ್-19: 4
- ಎಚ್1ಎನ್1 :107
ಈ ಬಗ್ಗೆ 'ಈಟಿವಿ ಭಾರತ್' ಜೊತೆ ಮಾತನಾಡಿದ ಪ್ರಭಾರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಪ್ರಶಾಂತ್ ಭಟ್, ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಈಗಾಗಲೇ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವುದು ಸಹಿತ ಸ್ವಯಂ ಜಾಗೃತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಹವಾಮಾನ ವೈಪರೀತ್ಯದಿಂದಲೂ ಕೆಲವು ಮಂದಿಗೆ ರೋಗರುಜಿನಗಳು ಹರಡುವ ಸಾಧ್ಯತೆಗಳಿದ್ದು, ಈ ಬಗ್ಗೆ ಎಚ್ಚರದಿಂದ ಇದ್ದರೆ ಉತ್ತಮ. ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕ್ಷೀಣಿಸುತ್ತಿರುವ ಮುಂಗಾರು: ಅಕ್ಟೋಬರ್ 1ರಿಂದ ಹಿಂಗಾರು ಮಳೆ ಆರಂಭ - Karnataka Rain Forecast