ಬೆಂಗಳೂರು: ರಾಜಭವನ ಚಲೋ ನಡೆಸಲು ಕಾಂಗ್ರೆಸ್ ಪಕ್ಷದ ನಾಯಕರಿಗೆ ನೈತಿಕತೆ ಇಲ್ಲ, ಅವರ ವರಿಷ್ಠರಿಗೂ ನೈತಿಕತೆ ಇಲ್ಲ ಎಂದು ಮಾಜಿ ಸಚಿವ, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ನಾವು ತಪ್ಪು ಮಾಡಿದರೆ ಬಂಧನ ಮಾಡುತ್ತಾರೆ. ಇವರು ತಪ್ಪು ಮಾಡಬಹುದು. ಅಧಿಕಾರ ದುರ್ಬಳಕೆ ಮಾಡಿ ಸಿದ್ದರಾಮಯ್ಯ ಸಾಕ್ಷಿ ಸಮೇತ ಸಿಕ್ಕಿಕೊಂಡಿದ್ದಾರೆ. ಮೊದಲು ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಚನ್ನಪಟ್ಟಣ ಟಿಕೆಟ್ ವಿಚಾರಕ್ಕೆ ದೆಹಲಿಗೆ ಭೇಟಿ ನೀಡಿದ ವಿಚಾರಕ್ಕೆ ಮಾತನಾಡಿದ ಅವರು, ನಾವು ಒಗ್ಗಟ್ಟಿನಲ್ಲಿ ನಡೆಯಬೇಕು, ನಮ್ಮ ವರಿಷ್ಠರ ಜೊತೆ ಚರ್ಚೆ ಮಾಡಿದ್ದೇವೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಗೂ ವರಿಷ್ಠರ ಜೊತೆಗೆ ಚರ್ಚೆ ಮಾಡಿದ್ದೇವೆ. ನಾವು ಒಗ್ಗಟ್ಟಿನಲ್ಲಿ ಹೋಗಬೇಕು, ಒಂದಾಗಿರಬೇಕು ಅಂತ ನಿರ್ಣಯ ಮಾಡಿದ್ದೇವೆ. ಯಾರನ್ನು ಅಭ್ಯರ್ಥಿ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಯಾರು ಅಭ್ಯರ್ಥಿ ಅಂತ ತಿಳಿಸುವ ಕೆಲಸ ಆಗಲಿದೆ ಎಂದು ಹೇಳಿದರು.
ಸಿ. ಪಿ. ಯೋಗೀಶ್ವರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಅವರೂ ಸಹಕಾರ ಕೊಡಬೇಕು, ಕುಮಾರಸ್ವಾಮಿ ಅವರ ಸಹಕಾರವೂ ಬೇಕು. ಎಲ್ಲಾ ಒಟ್ಟಿಗೆ ಹೋಗಬೇಕು ಅಂತ ಚರ್ಚೆ ಮಾಡಿದ್ದೇವೆ. ಎನ್‌ಡಿಎ ಅಭ್ಯರ್ಥಿ ಯಾರು ಅಂತ ಇನ್ನೂ ನಿರ್ಧಾರ ಆಗಿಲ್ಲ, ಉಪ ಚುನಾವಣೆಯ ಅಧಿಸೂಚನೆ ನಂತರ ಅಭ್ಯರ್ಥಿ ಬಗ್ಗೆ ಚರ್ಚೆ ಆಗಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರಿಂದ ರಾಜಭವನ ಚಲೋ: ಎನ್‌ಡಿಎ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಕೇಂದ್ರದ ಕೈಗೊಂಬೆಯಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಆಗ್ರಹಿಸಿದರು.
ಲೋಕಾಯುಕ್ತರು ತನಿಖೆ ಮಾಡಿ ಚಾರ್ಜ್ ಶೀಟ್ ಹಾಕಿದ್ರೂ ಹೆಚ್.ಡಿ. ಕುಮಾರಸ್ವಾಮಿ ಮೇಲೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿಲ್ಲ. ಜೊತೆಗೆ ಮುರುಗೇಶ್ ನಿರಾಣಿ, ಜನಾರ್ದನ್ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆಯವರ ಮೇಲಿನ ಪ್ರಕರಣಗಳ ಸಂಬಂಧ ಕೂಡ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.
ಪಾದಯಾತ್ರೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಲಕ್ಷ್ಮಿ ಹೆಬ್ಬಾಳ್ಕರ್, ಕೆ.ಹೆಚ್. ಮುನಿಯಪ್ಪ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕರು ಮತ್ತು ಸಂಸದರು ಸೇರಿದಂತೆ ಹಲವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.