ಚಾಮರಾಜನಗರ: ಕಾವೇರಿ ಮೈದುಂಬಿ ಹರಿಯುತ್ತಿದ್ದು, ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ವೈಯ್ಯಾರದಿಂದ ಧುಮ್ಮಿಕ್ಕುತ್ತಿದೆ. ಈ ಹಿನ್ನೆಲೆಯಲ್ಲಿ 10 ವರ್ಷಗಳ ಬಳಿಕ ಜಿಲ್ಲಾಡಳಿತ ಜಲಪಾತೋತ್ಸವ ಆಯೋಜಿಸಿದೆ. ಈ ಕುರಿತು ಇಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆ.10ರಂದು ಸಂಜೆ 6ಕ್ಕೆ ಭರಚುಕ್ಕಿಯಲ್ಲಿ ನಡೆಯಲಿರುವ ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ ಎಂದು ಅವರು ಹೇಳಿದರು.
ಶಬ್ಧ-ಬೆಳಕಿನ ಜುಗಲ್ಬಂದಿ: ಧುಮ್ಮಿಕ್ಕುವ ಜಲಪಾತಕ್ಕೆ ಶಬ್ಧ ಮತ್ತು ಬೆಳಕನ್ನು ಸಂಯೋಜಿಸಿ, ಜಲಪಾತವನ್ನು ಮತ್ತಷ್ಟು ಸಿಂಗರಿಸಲಾಗುತ್ತದೆ. ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದೆ. ಜಾನಪದಗಳ ನಾಡೆಂದೇ ಚಾಮರಾಜನಗರವನ್ನು ಕರೆಯುವ ಹಿನ್ನೆಲೆಯಲ್ಲಿ ಜಾನಪದ ಸಂಗೀತ ಸುಧೆಯೂ ಇರಲಿದೆ.
ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ವತಿಯಿಂದ 4 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಹಾಗೂ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಒಂದು ದಿನ ಸಾಂಸ್ಕೃತಿಕ ಕಾರ್ಯಕ್ರಮ, ಎರಡು ದಿನ ಶಬ್ಧ-ಬೆಳಕಿನ ಚಿತ್ತಾರ ಇರಲಿದೆ. ವೀಕ್ಷಣೆಗೆ ಪ್ರವೇಶ ಉಚಿತ ಎಂದು ಡಿಸಿ ವಿವರ ನೀಡಿದರು.
ಪ್ರವಾಸೋದೋದ್ಯಮ ಕುರಿತು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಸಾಹಸ ಕ್ರೀಡೆಗಳೂ ನಡೆಯಲಿವೆ. ಧಾರ್ಮಿಕ ಪ್ರವಾಸೋದ್ಯಮ, ಅರಣ್ಯ ಆಧರಿತ ಪ್ರವಾಸೋದ್ಯಮ ಸೇರಿ ಜಿಲ್ಲೆಯ ಪ್ರಮುಖ ಸ್ಥಳಗಳನ್ನು ತೋರಿಸಲು ಯೋಜಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರಿಂದ ಮೊದಲ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದೇವೆ. ಭರಚುಕ್ಕಿಯ ಲೋಗೋ ಕೂಡಾ ಅನಾವರಣಗೊಳ್ಳಲಿದೆ. ಚೆಲುವ ಚಾಮರಾಜನಗರ ಲೋಗೋವನ್ನು ಮತ್ತೊಮ್ಮೆ ರಿಲೀಸ್ ಮಾಡಲಾಗುವುದು. ವರ್ಷದುದ್ದಕ್ಕೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರವಾಸಿಗರನ್ನು ಸೆಳೆಯಲಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: 'ಚೆಲುವ ಚಾಮರಾಜನಗರ ಬ್ರ್ಯಾಂಡ್'ಗೆ ರಾಯಭಾರಿಯ ಹುಡುಕಾಟ - Cheluva Chamarajanagar Brand