ಕಾರವಾರ: ''ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗುಡ್ಡ ಕುಸಿತ ಪ್ರದೇಶಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯನವರು ನಾಳೆ (ಭಾನುವಾರ) ಬಂದು ವೀಕ್ಷಣೆ ಮಾಡಲಿದ್ದಾರೆ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ತಿಳಿಸಿದ್ದಾರೆ.
ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ''ಕಳೆದ ಐದು ದಿನದಿಂದಲೂ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಾನು ಕೂಡ ಮೂರು ದಿನವೂ ಇಲ್ಲಿಗೆ ಬಂದಿದ್ದೇನೆ. ಸ್ಥಳೀಯ ಶಾಸಕ ಸತೀಶ್ ಸೈಲ್ ಅವರು ಕೂಡ ಇಲ್ಲಿಯೇ ಇದ್ದಾರೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಆಗಮಿಸಲಿದ್ದಾರೆ. ಕಾರ್ಯಾಚರಣೆಯನ್ನು ಎಷ್ಟು ವೇಗದಲ್ಲಿ ಮಾಡಲು ಸಾಧ್ಯವಿದೆಯೋ ಅಷ್ಟು ವೇಗದಲ್ಲಿ ಮಾಡುತ್ತಿದ್ದೇವೆ. ಇದು ಸಣ್ಣ ಪ್ರಮಾಣದ ಘಟನೆಯಲ್ಲ. ಈ ಕಾರಣದಿಂದ ಇನ್ನೂ ಎರಡು ದಿನ ಬೇಕಾಗುವ ಸಾಧ್ಯತೆ ಇದೆ'' ಎಂದರು.
''ನೌಕಾನೆಲೆಯ ಹೆಲಿಕಾಪ್ಟರ್ ಕಾರ್ಯಾಚರಣೆಗೆ ಹವಾಮಾನ ತೊಂದರೆಯಿಂದ ಸಾಧ್ಯವಾಗಿಲ್ಲ. ಇದರಿಂದ ನದಿಯಲ್ಲಿ ನಾಪತ್ತೆಯಾದ ಲಾರಿ ಹಾಗೂ ಮೂವರು ಹುಡುಕಾಟಕ್ಕೆ ಅಡಚಣೆಯಾಗಿದೆ. ಸೂರತ್ಕಲ್ನಿಂದ ರೆಡಾರ್ ಯಂತ್ರವನ್ನು ತಂದು ಕೂಡ ಹುಡುಕಾಟ ನಡೆಸಲಾಗುತ್ತಿದೆ. ಮಳೆ ಜೋರಾಗಿದ್ದ ಕಾರಣ ನೀರು ಮಣ್ಣು ಮಿಕ್ಸ್ ಆಗಿದೆ, ಅದರಲ್ಲಿಯೂ ಪತ್ತೆಕಾರ್ಯ ಸಾಧ್ಯವಾಗಿಲ್ಲ. ನಾವು ಏನು ಪ್ರಯತ್ನ ಮಾಡಬೇಕೋ ಎಲ್ಲವನ್ನು ಮಾಡುತ್ತಿದ್ದೇವೆ'' ಎಂದು ಹೇಳಿದರು.
ಲಾರಿ ಚಾಲಕನ ಪೋನ್ ರಿಂಗ್ ಆಗುತ್ತಿರುವ ಬಗ್ಗೆ ಮಾಹಿತಿ ಹರಿದಾಡುತ್ತಿರುವ ಬಗ್ಗೆ ಕೇಳಿದಾಗ, ''ನಾನು ಕೂಡ ಗುಡ್ಡ ಮೇಲೆ ಹತ್ತಿ ನೋಡಿದ್ದೇನೆ. ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲಿ ಲಾರಿ ಇರುವ ಯಾವುದೇ ಕುರುಹು ಇಲ್ಲ. ಆದರೆ, ನಾಪತ್ತೆಯಾದವರಿಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ'' ಎಂದು ಮಾಹಿತಿ ನೀಡಿದರು. ''ಇಷ್ಟೊಂದು ಅವಾಂತರಕ್ಕೆ ಐಆರ್ಬಿ ಕಂಪನಿಯೇ ಕಾರಣ. ಇಲ್ಲಿ ಆಗಿರುವ ಹಾನಿ ಪರಿಹಾರವನ್ನು ಐಆರ್ಬಿ ಕಂಪೆನಿಯೇ ನೀಡಬೇಕು. ಆದರೆ, ನಾವು ಸರ್ಕಾರದಿಂದ ನೀಡಿದ್ದೇವೆ. ಪರಿಹಾರವನ್ನು ಅವರು ನೀಡಬೇಕು'' ಎಂದರು.
ಇದನ್ನೂ ಓದಿ: ಮಳೆಯ ಆರ್ಭಟ: ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಈವರೆಗಿನ ಸ್ಥಿತಿಗತಿ ಏನಿದೆ? - KARNATAKA RAIN UPDATE