ಬೆಂಗಳೂರು: ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ 'ಎಕ್ಸ್' ಪೋಸ್ಟ್ ಮಾಡಿರುವ ಅವರು, ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಈ ನೆಲದ ಕಾನೂನನ್ನು ಗೌರವಿಸುವ ಓರ್ವ ಪ್ರಜೆಯಾಗಿ ಸುಳ್ಳು ಪ್ರಕರಣದಲ್ಲಿ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ರಾಜಕೀಯಪ್ರೇರಿತ ನಿರ್ಣಯದ ವಿರುದ್ಧ ಘನ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದೇನೆ ಎಂದರು.
ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಆಲಿಸಿ, ಮುಂದಿನ ವಿಚಾರಣೆಯವರೆಗೆ ವಿಶೇಷ ನ್ಯಾಯಾಲಯಗಳು ವಿಚಾರಣೆ ಮುಂದೂಡಬೇಕು, ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತ ನನ್ನ ಧನ್ಯವಾದ ಸಲ್ಲಿಸುತ್ತೇನೆ. ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆಯಾಗಿದೆ. ಸತ್ಯಮೇವ ಜಯತೆ ಎಂದು ತಿಳಿಸಿದ್ದಾರೆ.
ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ನಂಬಿಕೆಯಿಟ್ಟಿರುವ, ಈ ನೆಲದ ಕಾನೂನನ್ನು ಗೌರವಿಸುವ ಓರ್ವ ಪ್ರಜೆಯಾಗಿ ಸುಳ್ಳು ಪ್ರಕರಣದಲ್ಲಿ ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ರಾಜಕೀಯ ಪ್ರೇರಿತ ನಿರ್ಣಯದ ವಿರುದ್ಧ ಘನ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದೇನೆ.
— Siddaramaiah (@siddaramaiah) August 19, 2024
ಉಚ್ಚ ನ್ಯಾಯಾಲಯವು ಈ ವಿಚಾರವನ್ನು ಆಲಿಸಿ,…
ಕೋರ್ಟ್ ವಿಚಾರಣೆಯನ್ನು ವೀಕ್ಷಿಸಿದ ಸಿಎಂ: ಖಾಸಗಿ ಹೊಟೇಲ್ನಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವರ ಜೊತೆಗೂಡಿ ಹೈಕೋರ್ಟ್ನಲ್ಲಿ ನಡೆದ ವಾದ ಪ್ರತಿವಾದದ ಲೈವ್ ವೀಕ್ಷಿಸಿದರು. ಈ ಸಂದರ್ಭ ಸಚಿವರಾದ ಬೈರತಿ ಸುರೇಶ್, ಎಂ.ಸಿ.ಸುಧಾಕರ್, ಜಮೀರ್ ಅಹಮದ್ ಖಾನ್ ಸಾತ್ ನೀಡಿದರು.
ಹೈಕೋರ್ಟ್ ವಿಚಾರಣೆ ಮುಗಿಯುವ ತನಕ ಸಿಎಂ ಸಿದ್ದರಾಮಯ್ಯ ಖಾಸಗಿ ಹೊಟೇಲ್ನಲ್ಲಿದ್ದು ಸಂಪೂರ್ಣ ವಿಚಾರಣೆಯನ್ನು ವೀಕ್ಷಿಸಿದರು. ಕೋರ್ಟ್ ಕಲಾಪದ ಬಳಿಕ ಖ್ಯಾತ ಸುಪ್ರೀಂ ಕೋರ್ಟ್ ವಕೀಲರ ಜೊತೆ ಸಮಾಲೋಚನೆ ನಡೆಸಿದರು. ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಘ್ವಿ ಹಾಗೂ ಪ್ರಶಾಂತ್ ಭೂಷಣ್ ಜೊತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಸಿಎಂ ಚರ್ಚೆ ನಡೆಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ಹೈಕೋರ್ಟ್ನಲ್ಲಿ ನಡೆದ ವಾದವೇನು? - Muda Scam