ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ತಮ್ಮ ಹಕ್ಕು ಚಲಾಯಿಸಿದರು. ಮತ ಚಲಾವಣೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣೆಯಲ್ಲಿ ಸೊಲುತ್ತೇವೆ ಅಂತ ಯಾರು ನಿಂತುಕೊಳ್ಳುವುದಿಲ್ಲ. ನಮಗೆ ಎಷ್ಟು ಮತಗಳು ಬೇಕೋ ಅಷ್ಟು ಬರುತ್ತದೆ. ಜೆಡಿಎಸ್ ಅಭ್ಯರ್ಥಿಯನ್ನ ಚುನಾವಣೆಗೆ ನಿಲ್ಲಿಸುವ ಅಗತ್ಯವಿರಲಿಲ್ಲ ಆದರೂ ಹಾಕಿದ್ದಾರೆ. ನಮ್ಮ ಅಭ್ಯರ್ಥಿಗೆ ನಿಷ್ಠೆಯಿಂದ ಮತಹಾಕಬೇಕು ಎಂದು ಸೂಚಿಸಿದ್ದೇವೆ. ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಬೇರೆ ಪಕ್ಷಗಳಿಂದ ಮತಗಳು ಬರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಮತ ಬರಬಹುದು. ಆಸೆ ಆಮಿಷ ಒಡ್ಡುವ ಪ್ರಮೇಯವೇ ಇಲ್ಲ. 134 + 4 ಪಕ್ಷೇತರರ ಬೆಂಬಲ ಇದೆ. ಲತಾ, ದರ್ಶನ್ ಪುಟ್ಟಣ್ಣಯ್ಯ, ಪುಟ್ಟಸ್ವಾಮಿ ಗೌಡ ಹಾಗೂ ಜನಾರ್ದನ ರೆಡ್ಡಿ ನಮಗೆ ವೋಟ್ ಹಾಕುತ್ತಾರೆ. ಆಸೆ ಆಮಿಷ ಒಡ್ಡುವುದು ಜೆಡಿಎಸ್ನವರು ನಾವಲ್ಲ. ಜೆಡಿಎಸ್ನವರಿಗೆ ಆತ್ಮವೇ ಇಲ್ಲ ಸಾಕ್ಷಿ ಎಲ್ಲಿದೆ ಎಂದು ಟೀಕಿಸಿದರು. ನಿಮ್ಮ ಜೊತೆ ಯಾರು ಯಾರ ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ, ಎಲ್ಲರೂ ಇದ್ದಾರೆ. ಜನತಾದಳ ಸೆಕ್ಯೂಲರ್ ಅಂತ ಇಟ್ಟುಕೊಂಡಿದ್ದಾರೆ. ಆದರೆ ಯಾರ ಜೊತೆ ಸೇರಿಕೊಂಡಿದ್ದಾರೆ ಎಂದು ಭರ್ಜರಿಯಾಗೇ ಟಾಂಗ್ ನೀಡಿದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಮತದಾನ ಬಿರುಸು: ನಮ್ಮ ಅಭ್ಯರ್ಥಿಗಳಿಗೆ ತಲಾ 47 ಮತ ಬೀಳಲಿದೆ ಎಂದ ಸಚಿವ ಎಂ.ಬಿ.ಪಾಟೀಲ್
ಕೈ ಅಭ್ಯರ್ಥಿಗಳಿಗೆ ತಲಾ 47 ಮತ ಬೀಳುವ ನಿರೀಕ್ಷೆ- ಸಚಿವ ಎಂ ಬಿ ಪಾಟೀಲ್: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ಒಬ್ಬೊಬ್ಬರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಇತ್ತ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲುತ್ತಾರೆ. ಪಕ್ಷೇತರರು ನಮಗೆ ಬೆಂಬಲ ಕೊಡ್ತಿದ್ದಾರೆ. ನೀರಿಕ್ಷೇಗಿಂತ ಹೆಚ್ಚು ಮತಗಳು ಬರುತ್ತೆ. ನಿರಾಯಸವಾಗಿ ನಮ್ಮ ಅಭ್ಯರ್ಥಿಗಳು ಗೆಲ್ತಾರೆ. ನಮ್ಮ 3 ಅಭ್ಯರ್ಥಿಗಳಿಗೆ ತಲಾ 47 ಮತಗಳು ಬರುವ ನೀರಿಕ್ಷೆ ಇದೆ ಎಂದರು.
ಸಂಶಯ ನಮಗಿಲ್ಲ: ಇದೇ ವೇಳೆ ಮಾತನಾಡಿದ ಆರ್.ವಿ. ದೇಶಪಾಂಡೆ, ನಮಗೆ ಯಾವುದೇ ಸಂಶಯ ಇಲ್ಲ. ನಮ್ಮ ಅಭ್ಯರ್ಥಿ ಗೆಲ್ತಾರೆ. ಬಿಜೆಪಿಯವರಿಗಷ್ಟೇ ಸಂಶಯ ಇರೋದು. ಕುಪೇಂದ್ರ ರೆಡ್ಡಿ ನಮಗೆ ಪರಿಚಯ ಅಷ್ಟೇ. ಆದರೆ ಮತ ಕೇಳಿಲ್ಲ. ನಾಮಪತ್ರ ಸಲ್ಲಿಸುವ ಮುನ್ನ ಸಿಕ್ಕಿದ್ದರು. ನಾಮಪತ್ರ ಸಲ್ಲಿಸಿದ ನಂತರ ಅವರು ನನಗೆ ಸಿಕ್ಕಿಲ್ಲ ಎಂದು ಹೇಳಿದರು.