ಮೈಸೂರು: ನರೇಂದ್ರ ಮೋದಿ ಹುಟ್ಟಿಸಿದ ಭ್ರಮೆಗಳೆಲ್ಲಾ ಬೆತ್ತಲಾಗಿವೆ. ನೀವಿನ್ನೂ ಮೋದಿ ಭ್ರಮೆಯಲ್ಲಿದ್ದೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ಭಾರತದ ಭವಿಷ್ಯ ಹಾಗೂ ಆರ್ಥಿಕತೆ ದೃಷ್ಟಿಯಿಂದ ಬಹಳ ನಿರ್ಣಾಯಕವಾಗಿದೆ ಎಂದರು.
ಕಳೆದ 10 ವರ್ಷ ನೀವು ಬಿಜೆಪಿಗೆ ವೋಟ್ ಹಾಕಿದ್ದು ಏಕೆ?. ಯಾವ್ಯಾವ ಕಾರಣಗಳಿಂದ ವೋಟ್ ಹಾಕಿದ್ರಿ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಿ. ಮೋದಿ ಹೇಳಿದ್ದರಲ್ಲಿ ಒಂದೇ ಒಂದನ್ನಾದರೂ ಈಡೇರಿಸಿದ್ದಾರಾ?. ಕಳೆದ 10 ವರ್ಷಗಳಲ್ಲಿ ಭಾರತೀಯರನ್ನು ಭಾವನಾತ್ಮಕವಾಗಿ ಕೆರಳಿಸಿ ವಂಚಿಸಿದ್ದು ಬಿಟ್ಟರೆ ಭಾರತೀಯರ ಬದುಕಿಗೆ ಬೇಕಾದ ಒಂದೇ ಒಂದು ಕೆಲಸವನ್ನಾದರೂ ಮಾಡಿದ್ದಾರಾ ಎಂಬುದನ್ನು ನಿಮ್ಮ ಆತ್ಮಸಾಕ್ಷಿಗೆ ಕೇಳಿಕೊಳ್ಳಿ. ನೀವು ಬಿಜೆಪಿ ಮೇಲಿಟ್ಟಿದ್ದ ನಂಬಿಕೆಗಳಿಗೆ ಮೋಸ ಆಗಿದೆ ತಾನೇ?. ನಿಮ್ಮ ನಂಬಿಕೆಗಳಿಗೆ ಮೋಸ ಮಾಡಿ ವಂಚಿಸಿದ ಮೋದಿ ಮತ್ತು ಬಿಜೆಪಿಯ ಸುಳ್ಳುಗಳಿಗೆ ಮತ್ತೆ ಮತ್ತೆ ತಲೆ ಒತ್ತೆ ಇಟ್ಟು ಮರುಳಾಗಬೇಡಿ ಎಂದು ಮನವಿ ಮಾಡಿದರು.
ಮೋದಿಯನ್ನು ನಂಬಿ ಮೋಸ ಹೋಗಬೇಡಿ: ನಾವು ನುಡಿದಂತೆ ನಡೆದಿದ್ದೇವೆ. ನಿಮ್ಮ ನಂಬಿಕೆಗಳಿಗೆ, ನಾವು ಕೊಟ್ಟ ಮಾತಿಗೆ ಗೌರವ ಸಲ್ಲಿಸಿದ್ದೇವೆ. ನಿಮ್ಮ ವೋಟಿಗೆ ಘನತೆ ತಂದಿದ್ದೇವೆ. ಪ್ರತಿ ಕುಟುಂಬಕ್ಕೆ ಪ್ರತೀ ತಿಂಗಳು 5 ರಿಂದ 6 ಸಾವಿರ ರೂಪಾಯಿ ಉಳಿತಾಯ ಆಗುವಂತೆ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೇವೆ. ಆದ್ದರಿಂದ ನಿಮ್ಮ ಬದುಕಿಗೆ ನೆರವಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ತುಂಬಿ. ಭಾರತೀಯರನ್ನು ನಂಬಿಸಿ ಬಕ್ರಾ ಮಾಡುವ ಮೋದಿಯವರನ್ನು, ಬಿಜೆಪಿಯನ್ನು ನಂಬಿ ಮತ್ತೆ ಮೋಸ ಹೋಗಬೇಡಿ ಎಂದು ಕರೆ ನೀಡಿದರು.