ETV Bharat / state

ಶ್ರೀರಾಮಚಂದ್ರ ಎಲ್ಲಾ ಜಾತಿ, ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದರು: ಸಿಎಂ ಸಿದ್ದರಾಮಯ್ಯ - ಮಹತ್ಮಾಗಾಂಧಿ ಪುಣ್ಯಸ್ಮರಣೆ

ಶ್ರೀರಾಮ ಅಂದರೆ ಸತ್ಯ ಪರಿಪಾಲನೆ ಮಾಡುವವರು. ಅವರು ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಎಲ್ಲಾ ಜಾತಿ, ಧರ್ಮವನ್ನೂ ಸಮಾನವಾಗಿ ಕಾಣುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Jan 30, 2024, 2:20 PM IST

Updated : Jan 30, 2024, 2:27 PM IST

ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು: ಶ್ರೀರಾಮಚಂದ್ರ ಎಲ್ಲಾ ಜಾತಿ, ಧರ್ಮವನ್ನು ಸಮಾನವಾಗಿ ಕಾಣುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗಾಂಧಿ ಪುಣ್ಯಸ್ಮರಣೆಯಂದು ಶ್ರೀರಾಮ ಚಂದ್ರರ ಆದರ್ಶವನ್ನು ಸ್ಮರಿಸಿ ಪರೋಕ್ಷವಾಗಿ ಬಿಜೆಪಿಗೆ ಟಾಂಗ್ ಕೊಟ್ಟರು.

ವಿಧಾನಸೌಧದಲ್ಲಿ ಮಹತ್ಮಾಗಾಂಧಿ ಪುಣ್ಯಸ್ಮರಣೆ ಪ್ರಯುಕ್ತ ಪ್ರತಿಮೆ ಪುಷ್ಪ ನಮನ ಸಲ್ಲಿಸಿದ ಬಳಿಕ ಮಾತನಾಡುತ್ತಾ, ಮಹಾತ್ಮ ಗಾಂಧೀಜಿ ಸಾಯುವಾಗ ಹೇ ರಾಮ್ ಅಂತ ಉಚ್ಚಾರ ಮಾಡಿ ಪ್ರಾಣ ತ್ಯಾಗ ಮಾಡಿದ್ದರು. ಶ್ರೀ ರಾಮ‌ಚಂದ್ರನ ಬಗ್ಗೆ ಅಪಾರವಾದ ಭಕ್ತಿ, ನಂಬಿಕೆ ಇಟ್ಟಿದ್ದರು. ಅದಕ್ಕೆ ಅವರು ಯಾವತ್ತೂ ರಘು ಪತಿ ರಾಘವ ರಾಜಾ ರಾಮ್ ಪತೀತ ಪಾವನ ಸೀತಾ ರಾಮ್ ಅಂತಿದ್ದರು. ನಾವೂ ಅದನ್ನು ಪ್ರತಿ ಕಾರ್ಯಕ್ರಮದಲ್ಲೂ ಹೇಳುತ್ತೇವೆ ಎಂದರು.

ಶ್ರೀರಾಮಚಂದ್ರ ದಶರಥರಾಜ ಹಾಗೂ ಕೌಸಲ್ಯಾ ದೇವಿಯ ಮಗ. ದಶರಥ ಮಹಾರಾಜರಿಗೆ ಮೂರು ಜನ ಹೆಂಡತಿಯರು. ಮೂವರ ಪೈಕಿ ಕೌಸಲ್ಯ ದೇವಿಯ ಮಗ ಶ್ರೀರಾಮಚಂದ್ರ. ಶ್ರೀರಾಮಚಂದ್ರ ಪಿತೃವಾಕ್ಯ ಪರಿಪಾಲನೆಗಾಗಿ ರಾಜ್ಯವನ್ನು ತ್ಯಾಗ ಮಾಡಿ ಸಹೋದರ ಭರತನಿಗೆ ಪಟ್ಟ ಕಟ್ಟಿ ಕಾಡಿಗೆ ಹೋಗುತ್ತಾರೆ. ಪತ್ನಿ ಸೀತೆ, ಸಹೋದರ ಲಕ್ಷ್ಮಣನ ಜೊತೆಗಿರುತ್ತಾರೆ. ಬಳಿಕ 14 ವರ್ಷ ವನವಾಸ ಮಾಡುತ್ತಾರೆ. ಶ್ರೀರಾಮ ಅಂದರೆ ಸತ್ಯ ಪರಿಪಾಲನೆ ಮಾಡುವವರು. ಅವರು ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರು. ಅದಕ್ಕೆ ನಾವು ದೇಶ, ಕರ್ನಾಟಕ ರಾಮ ರಾಜ್ಯ ಆಗಬೇಕು ಅಂತೇವೆ. ಅಷ್ಟರಮಟ್ಟಿಗೆ ಆದರ್ಶ ರಾಜ್ಯವನ್ನು ಶ್ರೀರಾಮಚಂದ್ರ ಕೊಡುತ್ತಿದ್ದರು. ಅಂತಹ ವ್ಯಕ್ತಿಯ ಆದರ್ಶವನ್ನು ಪ್ರತಿಪಾದಿಸುತ್ತಿದ್ದ ಗಾಂಧಿಯನ್ನು ಒಬ್ಬ ಮತಾಂಧ ಕೊಂದು ಹಾಕುತ್ತಾನೆ. ನಾನು ರಾಜಕೀಯ ಮಾತನಾಡಲ್ಲ. ಅದರ ಅಗತ್ಯ ಇಲ್ಲ. ಗಾಂಧಿ ಎಲ್ಲಾ ಧರ್ಮದವರನ್ನು ಪ್ರೀತಿಸುತ್ತಿದ್ದರು. ಎಲ್ಲರನ್ನೂ ಮನುಷ್ಯರಾಗಿ ಕಾಣುತ್ತಿದ್ದರು. ಮನುಷ್ಯ ಮನುಷ್ಯ ನಡುವೆ ಪ್ರೀತಿ ಇರಬೇಕು ಹೊರತು ದ್ವೇಷ ಇರಬಾರದು ಎಂದು ಹೇಳಿದರು.

ಗೋಡ್ಸೆ ಪೂಜಿಸುವವರು ನಮ್ಮ ಮಧ್ಯೆ ಇದ್ದಾರೆ: ಗಾಂಧಿ ಸತ್ಯ ಹಿಂಸೆ ಮೂಲಕ ಸ್ವಾತಂತ್ರ್ಯ ಹೋರಾಟ ಮಾಡಿದವರು. ಅವರನ್ನು ರಾಷ್ಟ್ರಪಿತ ಎಂದು ಕರೆಯುತ್ತೇವೆ. ಅಂತಹ ವ್ಯಕ್ತಿಯನ್ನು ಕೊಂದು ಹಾಕಿದವರನ್ನು ಪೂಜಿಸುವ ಜನರು ನಮ್ಮ ಮಧ್ಯೆ ಇದ್ದಾರೆ. ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ಶಾಂತಿ‌ ಕದಡುವವರು ಗೋಡ್ಸೆ ವಂಶಸ್ಥರೇ, ಅವರ ಅನುಯಾಯಿಗಳೇ. ಸಮಾಜದಲ್ಲಿ ಶಾಂತಿ ಇರಬೇಕಾದರೆ ಪರಸ್ಪರ ಪ್ರೀತಿ, ವಿಶ್ವಾಸ ಇರಬೇಕು. ಪರಸ್ಪರ ಬೆಂಕಿ ಹಚ್ಚುವ ಕೆಲಸ ಆಗಬಾರದು ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದರು.

ಮಂಡ್ಯ ಜಿಲ್ಲಾಡಳಿತ ವಿಫಲವಾಗಿದೆ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ವೈಫಲ್ಯ ಅಂದರೆ ಏನು?. ಜಿಲ್ಲಾಡಳಿತ ಅನುಮತಿ ಕೊಟ್ಟಿದ್ದಾರೆ. ರಾಷ್ಟ್ರ ಧ್ವಜ ಹಾರಿಸಲು ಅನುಮತಿ ಕೊಟ್ಟಿದ್ದರು. ಮುಚ್ಚಳಿಕೆ ಬರೆದ ಬಳಿಕ ಅದಕ್ಕೆ ವಿರುದ್ದವಾಗಿ ಏಕೆ ನಡೆದುಕೊಂಡರು?. ಯಾವುದೇ ಪಕ್ಷದ ಬಾವುಟ ಹಾರಿಸುವ ಹಾಗಿಲ್ಲ. ಅಂದ ಮೇಲೆ ಇವರು ಮುಚ್ಚಳಿಕೆ ಏಕೆ ಬರೆದರು?. ರಾಜಕೀಯ ಲಾಭಗಳಿಸಲು ಆ ತರ ಮಾಡಿದರು. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ಕಿಡಿ ಕಾರಿದರು.

ಇದನ್ನೂ ಓದಿ: ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಶಿಪ್​ಗೆ ಗೃಹ ಸಚಿವ ಜಿ. ಪರಮೇಶ್ವರ್​ ಚಾಲನೆ

Last Updated : Jan 30, 2024, 2:27 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.