ಬೆಂಗಳೂರು: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಜೊತೆಗೆ, ಎಲೆಕ್ಟ್ರಾನಿಕ್ ಸಿಟಿಗೆ ದೇವರಾಜ ಅರಸು ಎಲೆಕ್ಟ್ರಾನಿಕ್ ಸಿಟಿ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ 109ನೇ ಜನ್ಮದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕ ಏಕೀಕರಣ 1956 ನವೆಂಬರ್ 1ರಂದೇ ಆಗಿದ್ದರೂ, 1973ರಲ್ಲಿ ಅರಸು ಅವರು ಕರ್ನಾಟಕ ಎಂದು ನಾಮಕರಣ ಮಾಡಿದರು. ಈ ಹಿನ್ನೆಲೆಯಲ್ಲಿಯೇ ನಾವು ಕರ್ನಾಟಕ ಸಂಭ್ರಮ ವರ್ಷಾಚರಣೆ ನಡೆಸುತ್ತಿದ್ದು, ನವೆಂಬರ್‌ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗದಲ್ಲಿ ನವೆಂಬರ್ 1ರಂದು ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.
ಹಿಂದುಳಿದವರನ್ನು ತುಳಿಯುವ ಹುನ್ನಾರ: ಮುಂದುವರೆದು ಮಾತನಾಡಿದ ಸಿಎಂ, ಹಿಂದುಳಿದವರನ್ನು ತುಳಿಯಲು ಈಗಲೂ ನಿರಂತರ ಹುನ್ನಾರಗಳು ನಡೆಯುತ್ತಿವೆ. ನಾನು ಮುಖ್ಯಮಂತ್ರಿ ಆದ ಮೇಲೆ ಬಡವರಿಗಾಗಿ, ಮಹಿಳೆಯರಿಗಾಗಿ, ರೈತರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳು ಬಡವರು, ಮಹಿಳೆಯರು, ರೈತರು, ಯುವಕರ ಪರವಾಗಿದೆ. ಆದರೆ ಬದಲಾವಣೆ ಬಯಸದ, ಬಡವರ ವಿರೋಧಿ ಪಟ್ಟಭದ್ರರು ಇದನ್ನು ವಿರೋಧಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನ್ನಣ್ಣ, ಶಾಸಕರಾದ ಶ್ರೀಕಂಠೇಗೌಡ, ರಿಜ್ವಾನ್ ಅರ್ಷದ್, ನಾರಾಯಣಸ್ವಾಮಿ, ಶ್ರೀನಿವಾಸ್, ಸುಧಾಮ್ ದಾಸ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೀರ್ತಿ ಗಣೇಶ್ ಎನ್.ಜಿ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಬಿ.ಶೆಟ್ಟಣ್ಣವರ್, ಆಯುಕ್ತ ಕೆ.ವಿ.ದಯಾನಂದ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಮಿಕ ಪರ ಹೋರಾಟಗಾರ, ಶೋಷಿತರ ಧ್ವನಿಯಾಗಿರುವ, ಕರ್ನಾಟಕ ಸರ್ಕಾರದ ಮಾಜಿ ಸಚಿವ ಎಸ್.ಕೆ.ಕಾಂತ ಅವರಿಗೆ 2024ನೇ ಸಾಲಿನ ರಾಜ್ಯ ಮಟ್ಟದ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ದೇವರಾಜ ಅರಸು ಪ್ರಶಸ್ತಿಗೆ ನಿಗದಿಪಡಿಸಿರುವ ಐದು ಲಕ್ಷ ನಗದು ಬಹುಮಾನವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಿಕೊಳ್ಳುವಂತೆ ಎಸ್.ಕೆ.ಕಾಂತ ಸರ್ಕಾರಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ಅಡ್ವಾಣಿಗೆ ನಿವಾಸಕ್ಕೆ ತೆರಳಿ 'ಭಾರತ ರತ್ನ' ಪ್ರಶಸ್ತಿ ಪ್ರದಾನ ರಾಷ್ಟ್ರಪತಿ ದ್ರೌಪದಿ ಮುರ್ಮು - L K Advani