ಬೆಂಗಳೂರು: ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದ ಹಗರಣಗಳ ತನಿಖಾ ಪ್ರಗತಿಯ ಮೇಲ್ವಿಚಾರಣೆ ಹಾಗೂ ಸಲಹೆಗಾಗಿ ಸರ್ಕಾರ ಸಮಿತಿ ರಚಿಸಿರುವುದನ್ನು ಬಿಜೆಪಿ ನಾಯಕರು ದ್ವೇಷದ ರಾಜಕಾರಣ ಎನ್ನುವುದಾದರೆ, ನನ್ನ ವಿರುದ್ಧ ಅವರು ಮಾಡುತ್ತಿರುವುದು ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ನಡೆದಿರುವ ಸುಮಾರು 21ಕ್ಕೂ ಹೆಚ್ಚು ಹಗರಣಗಳ ತನಿಖೆಯ ಪ್ರಗತಿ ಹಾಗೂ ಏನು ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಲು ಸಮಿತಿಯನ್ನು ರಚಿಸಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಮಿತಿಯಲ್ಲಿ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಎಚ್.ಕೆ.ಪಾಟೀಲ್ ಇದ್ದಾರೆ. ತನಿಖಾ ಸಂಸ್ಥೆಗಳ ಹಂತದಲ್ಲಿರುವ ವಿವಿಧ ಹಗರಣಗಳ ತನಿಖಾ ಪ್ರಗತಿಯ ಕುರಿತು ಒಂದು ಅಥವಾ ಎರಡು ತಿಂಗಳೊಳಗೆ ತ್ವರಿತವಾಗಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮ, ಶೇ 40ರಷ್ಟು ಕಮಿಷನ್ ಆರೋಪ, ಬಿಟ್ ಕಾಯಿನ್, ಕೋವಿಡ್ ಅವಧಿಯ ಅಕ್ರಮ ಸೇರಿದಂತೆ ಕೆಲವು ಪ್ರಕರಣಗಳ ತನಿಖೆಗೆ ಆಯೋಗಗಳನ್ನು ರಚಿಸಲಾಗಿದೆ. ಆದರೆ, ಇನ್ನೂ ಕೆಲವು ಪ್ರಕರಣಗಳ ಕುರಿತು ಕೈಗೊಳ್ಳಬೇಕಾದ ಕ್ರಮಗಳು ಇದುವರೆಗಿನ ತನಿಖೆಯ ವರದಿಯನ್ನು ಸಮಿತಿ ನೀಡಲಿದೆ. ಹಗರಣಗಳ ಕುರಿತು ತನಿಖೆಗೆ ವೇಗ ನೀಡುವ ಸಲುವಾಗಿಯೇ ಸಮಿತಿಯನ್ನು ರಚಿಸಿ ಸಲಹೆ ಪಡೆಯಲಾಗುತ್ತಿದೆ ಎಂದು ಹೇಳಿದರು.
ವಾಲ್ಮೀಕಿ ಹಗರಣದ ಕುರಿತು ಪ್ರತ್ಯೇಕ ತನಿಖೆ ನಡೆಸಿರುವ ಇಡಿ ಹಾಗೂ ಎಸ್ಐಟಿಗಳು ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ವ್ಯತಿರಿಕ್ತವಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಿವೆ ಎಂಬ ಕುರಿತು ಪ್ರತಿಕ್ರಿಯಿಸಿ, ಎರಡೂ ತನಿಖಾ ಸಂಸ್ಥೆಗಳು ತಮ್ಮದೇ ಸಾಕ್ಷ್ಯಗಳನ್ನ ಕಲೆಹಾಕಿ ದೋಷಾರೋಪಣೆ ಪಟ್ಟಿ ಸಲ್ಲಿಸಿವೆ. ಯಾವುದು ಸರಿ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ ಎಂದರು.
ಇದನ್ನೂ ಓದಿ: ವಾರದೊಳಗೆ ತನಿಖೆ ಬಾಕಿ ಇರುವ ಅಕ್ರಮ ಪ್ರಕರಣಗಳ ಪ್ರಗತಿ ಪರಿಶೀಲನೆಗೆ ಸಮಿತಿ ಸಭೆ: ಗೃಹ ಸಚಿವ ಜಿ. ಪರಮೇಶ್ವರ್ - G Parameshwara