ಮೈಸೂರು: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಡೆದಿದ್ದು ಭಾರೀ ಪ್ರಮಾಣದ ಸ್ಫೋಟವಲ್ಲ. ಆದರೆ, ಸುಧಾರಿತ ಸ್ಫೋಟ ಸಂಭವಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡಕನಹಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗಿರುವ ಮಾಹಿತಿ ಪ್ರಕಾರ ಮಧ್ಯಾಹ್ನ 12 ಗಂಟೆಗೆ ಯಾರೋ ಹೋಟೆಲ್ಗೆ ಬ್ಯಾಗ್ ತಂದಿಟ್ಟಿದ್ದು, ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ 9 ಜನ ಗಾಯಗೊಂಡಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದರು.
ಇದು ಉಗ್ರರ ಕೃತ್ಯವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೊತ್ತಿಲ್ಲ. ಪೊಲೀಸರು ತನಿಖೆ ಮಾಡುವಂತೆ ಸೂಚಿಸಿದ್ದೇವೆ. ಸ್ಥಳಕ್ಕೆ ಭೇಟಿ ನೀಡುವಂತೆ ಗೃಹ ಸಚಿವರಿಗೆ ಹೇಳಿದ್ದೇನೆ ಎಂದರು.
ಸ್ಫೋಟ ಪ್ರಕರಣಗಳು ಎಲ್ಲಾ ಕಾಲದಲ್ಲೂ ನಡೆದಿವೆ. ಆದರೆ ಇವೆಲ್ಲ ನಡೆಯಬಾರದು. ಈಗ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಮೊದಲ ಸ್ಫೋಟ ಇದಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ಸ್ಫೋಟ ಆಗಿತ್ತು. ಆದರೆ ಯಾರೇ ಆಗಲಿ ಈ ರೀತಿಯ ಪ್ರಕರಣಗಳಲ್ಲಿ ರಾಜಕಾರಣ ಮಾಡಬಾರದು. ಸದ್ಯ ನನಗೆ ಈ ವಿಚಾರದಲ್ಲಿ ಹೆಚ್ಚೇನೂ ಗೊತ್ತಿಲ್ಲ. ಈ ಬಗ್ಗೆ ಹೋಟೆಲ್ನಲ್ಲಿರುವ ಸಿಸಿಟಿವಿ ಹಾಗೂ ಕ್ಯಾಷಿಯರ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಇದೇ ವೇಳೆ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಫೆಯಲ್ಲಿ ಸಂಭವಿಸಿದ ನಿಗೂಢ ಸ್ಪೋಟದಿಂದ 9 ಜನ ಗಾಯಗೊಂಡಿದ್ದಾರೆ. ಇದು ಸಹಜವಾಗಿಯೇ ಆತಂಕಕ್ಕೀಡು ಮಾಡಿದೆ. ಸ್ಫೋಟದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದು NIA ಹಾಗೂ IBಗೂ ಮಾಹಿತಿ ರವಾನಿಸಲಾಗಿದೆ. ಪೊಲೀಸರು ಶೀಘ್ರದಲ್ಲೇ ಸ್ಫೋಟದ ಕಾರಣ ಕಂಡುಹಿಡಿಯಲಿದ್ದಾರೆ. ಗಾಯಾಳುಗಳಿಗೆ ಸರ್ಕಾರದಿಂದ ಅಗತ್ಯ ನೆರವು ಒದಗಿಸಲಾಗಿದೆ. ಜನರು ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು ಎಂದು ವಿನಂತಿಸುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಮ್ಮ 'ಎಕ್ಸ್' ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಜಿ & ಐಜಿಪಿ ಅಲೋಕ್ ಮೋಹನ್, "ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಗೆ ಬಾಂಬ್ ಸ್ಫೋಟವಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದೆವು. ಎಫ್.ಎಸ್.ಎಲ್ ತಂಡ ಕೂಡ ಬಂದಿದೆ. ಅಧಿಕಾರಿಗಳು ತನಿಖೆಯಲ್ಲಿದ್ದಾರೆ. ಘಟನೆಯಲ್ಲಿ ಸುಮಾರು 9 ಜನ ಗಾಯಗೊಂಡಿರುವ ಮಾಹಿತಿ ಇದೆ. ಸಿಎಂ ಮತ್ತು ಗೃಹ ಸಚಿವರೂ ಮಾಹಿತಿ ಪಡೆದಿದ್ದಾರೆ. ತನಿಖೆ ಬಳಿಕ ಹೆಚ್ಚಿನ ವಿವರ ಲಭ್ಯವಾಗಲಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: 9 ಮಂದಿಗೆ ಗಾಯ, ತನಿಖಾ ತಂಡಗಳಿಂದ ಪರಿಶೀಲನೆ