ಹುಬ್ಬಳ್ಳಿ (ಧಾರವಾಡ): ರಾಜ್ಯ ಸರ್ಕಾರ ಆಡಳಿತವನ್ನು ಹೇಗೆ ನಡೆಸಬೇಕು ಎಂಬುದನ್ನು ಮರೆತು ಹೋಗಿದೆ. ಸರ್ಕಾರದಲ್ಲಿ ನಡೆದ ಅಕ್ರಮಗಳಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕತೆ ಉಳಿಸಿಕೊಳ್ಳಲು ಆಗದೇ ಜನರ ಬಳಿ ಬರಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಂದ ಅನೇಕ ಪ್ರದೇಶಗಳಲ್ಲಿ ಅನಾಹುತಗಳಾಗಿವೆ. ವಿಶೇಷವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿಹೆಚ್ಚು ಹಾನಿಯಾಗಿವೆ. ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡ್ಡ ಕುಸಿತದಿಂದ ಸಾವು ನೋವು ಸಂಭವಿಸಿವೆ. ಶಿರೂರು ಎಂಬಲ್ಲಿ ಗುಡ್ಡ ಕುಸಿದು ಏಳು ಜನ ಸಾವಾಗಿದೆ ಎಂದು ವರದಿಯಾಗಿವೆ. ಹೀಗಾಗಿ ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಲು, ಜನರಿಗೆ ಧೈರ್ಯ ಹೇಳಲು ತೆರಳುವುದಾಗಿ ಹೇಳಿದರು. ನಾಳೆ, ಸಕಲೇಶಪುರ ಭಾಗದಲ್ಲಿನ ಅನಾಹುತಗಳ ಬಗ್ಗೆ ಜನರಿಂದ ತಿಳಿದು, ಸಾಂತ್ವನ ಹೇಳಲು ತೆರಳುವೆ ಎಂದರು.
ದೆಹಲಿಯಿಂದ ಕಳೆದ ಮೂರು ದಿನಗಳ ಹಿಂದೆಯೇ ರಾಜ್ಯಕ್ಕೆ ಬರಬೇಕಿತ್ತು. ಆದರೆ ಕೆಲವು ಕಾರ್ಯಕ್ರಮದ ನಿಮಿತ್ತವಾಗಿ ಬರಲು ಸಾಧ್ಯವಾಗಿಲ್ಲ. ಮನಸ್ಸು ಮಾತ್ರ ರಾಜ್ಯದ ಕಡೆಗೆ ಇತ್ತು. ರಾಜ್ಯದ ಅನೇಕ ಪ್ರದೇಶಗಳಲ್ಲಿ ಜನರು ನೀರಿನಲ್ಲಿ ಮುಳುಗಡೆ ಆಗಿದ್ದಾರೆ. ಹೀಗಿರುವಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಕಂದಾಯ ಸಚಿವರು ಡಿಸಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ, ಇಂತಹ ಸಂದರ್ಭಗಳಲ್ಲಿ ಖುದ್ದು ಸ್ಥಳಗಳಿಗೆ ಸಿಎಂ, ಸಚಿವರು ಭೇಟಿ ನೀಡಲು ಮುಂದಾಗಿಲ್ಲ. ಇದು ಸರ್ಕಾರ ಜನರ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆ ಎಂಬುದನ್ನು ತಿಳಿಸುತ್ತದೆ ಎಂದು ಹರಿಹಾಯ್ದರು.
ರಾಜ್ತ ಕಾಂಗ್ರೆಸ್ ಸರ್ಕಾರ ಇದೀಗ 21 ಪ್ರಕರಣಗಳನ್ನು ಹುಡುಕಿದೆ. ಅದರಲ್ಲಿ 2010 - 11 ರಲ್ಲಿ ನಡೆದ ಅಕ್ರಮಗಳ ಬಗ್ಗೆ ಉಲ್ಲೇಖಿಸಿದೆ. 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಅಧಿಕಾರದಲ್ಲಿತ್ತು. ಆಗ ಯಾಕೆ ತನಿಖೆ ಮಾಡಲಿಲ್ಲ. ಇದೀಗ ಗುಮ್ಮ ಬಿಡುವ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಲೇವಡಿ ಮಾಡಿದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದಿದೆ. ಈ ವೇಳೆ ಹಗರಣ ನಡೆದ ಬಗ್ಗೆ ಸರ್ಕಾರವೇ ಒಪ್ಪಿಕೊಂಡಿದೆ. ಆದರೆ, ಇದಕ್ಕೆ ಅಧಿಕಾರಿಗಳು ಹೊಣೆ ಎಂದು ಹೇಳಿದೆ. ಇದನ್ನು ನೋಡಿದರೇ ಸರ್ಕಾರ ಅಧಿಕಾರಿಗಳ ಮೇಲಿನ ತನ್ನ ನಿಯಂತ್ರಣ ಕಳೆದುಕೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇದೆ. ಈ ಬಗ್ಗೆ ಸರಿಯಾದ ತನಿಖೆಯಾಗಬೇಕು. ಮಂಗಳವಾರ ಬಜೆಟ್ ಇದೆ. ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರುವ ಎನ್ಡಿಆರ್ಎಫ್ ಹಣ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಓದಿ: ಯುಪಿಎಸ್ಸಿ ಅಧ್ಯಕ್ಷ ಮನೋಜ್ ಸೋನಿ ರಾಜೀನಾಮೆ: ಹುದ್ದೆ ತೊರೆಯಲು ಕಾರಣವೇನು ಗೊತ್ತಾ? - UPSC CHAIRMAN RESIGNS