ಬೆಳಗಾವಿ: "ಡಿಸೆಂಬರ್ ತಿಂಗಳಲ್ಲೇ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಅಶ್ಲೀಲ ವಿಡಿಯೋಗಳಿವೆ ಎಂಬ ಚರ್ಚೆಗಳಿವೆ. ವಿಡಿಯೋ ಇರುವ ಸಂಗತಿ ಗೊತ್ತಿದ್ದರೂ ಬಿಜೆಪಿಯವರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡರು" ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಪ್ರಜ್ವಲ್ ರೇವಣ್ಣನಿಗೂ ಮೈತ್ರಿ ಅಭ್ಯರ್ಥಿ ಎಂದು ಟಿಕೆಟ್ ಕೊಟ್ಟಿದ್ದಾರೆ. ಸಾಲದೆಂಬಂತೆ ಪ್ರಜ್ವಲ್ ಪರವಾಗಿ ಮೋದಿ ಹಾಗೂ ಅಮಿತ್ ಶಾ ಪ್ರಚಾರ ನಡೆಸಿದ್ದಾರೆ. ಪ್ರಜ್ವಲ್ ಬಂಧನಕ್ಕೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಅವರು ಎಲ್ಲಿಯೇ ಇದ್ದರೂ ಅವರ ಚಲನವಲನ ಗಮನಿಸಿ ಅವರನ್ನು ಕರೆದುಕೊಂಡು ಬರುತ್ತೇವೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಸ್ಪಷ್ಟಪಡಿಸಿದರು.
ರೇವಣ್ಣನವರ ವಿಡಿಯೋಗಳು ನಾಲ್ಕೈದು ವರ್ಷಗಳ ಹಿಂದಿನದು ಎಂಬ ಸಿ.ಟಿ.ರವಿ ಆರೋಪಕ್ಕೆ, "ಸಿ.ಟಿ.ರವಿ ಸುಳ್ಳು ಹೇಳುತ್ತಿದ್ದಾರೆ. ಜೆಡಿಎಸ್‌ನವರು ಈ ಮೊದಲು ಕಮ್ಯುನಲ್ ಪಾರ್ಟಿ ಎಂದು ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಸೇರಲ್ಲ ಅಂತಿದ್ದರು. ಮೋದಿ ಪ್ರಧಾನಿ ಆಗಲ್ಲ, ಆದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಗೌಡರು ಹೇಳಿದ್ದರು. ಮೋದಿ ಪ್ರಧಾನಿ ಆದ ಬಳಿಕ ದೇವೇಗೌಡರು ದೇಶ ಬಿಟ್ಟು ಹೋದರಾ.?" ಎಂದು ತಿರುಗೇಟು ಕೊಟ್ಟರು.
"ಮೋದಿಯವರು ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದು ಶೂನ್ಯ. ಬರೀ ಸುಳ್ಳು. ಧರ್ಮ, ಜಾತಿಗಳ ನಡುವೆ ಬೆಂಕಿ, ಭಜರಂಗದಳದ ಕಾರ್ಯಕರ್ತರಂತೆ ಮಾತನಾಡುತ್ತಾರೆ. ಹಾಗಾಗಿ, ಅವರಿಗೆ ರಾಜ್ಯದ ಜನ ಛಾಟಿ ಬೀಸಬೇಕು. ಇನ್ನು ಬಿಜೆಪಿ ಈಗಿನ ಜಾಹೀರಾತಿನಲ್ಲಿಸಂವಿಧಾನವೇ ನಮ್ಮ ಧರ್ಮ ಗ್ರಂಥ ಅಂದಿದ್ದಾರೆ. ಸಂವಿಧಾನ ರಚನೆ ಆದ ಮೇಲೆ ಅವರ ಪತ್ರಿಕೆ ಆರ್ಗನೈಸರ್ನಲ್ಲಿ ಏನು ಬರೆದರು ಎನ್ನುವುದು ಈಗಲೂ ಇತಿಹಾಸ. ಇವರ ಲೀಡರ್‌ಗಳು ಸಂವಿಧಾನದ ಬಗ್ಗೆ ಏನೇನು ಮಾತಾಡಿದ್ದಾರೆ. ನಾವು ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡಲು ಅನ್ನುತ್ತಾರೆ. ಮೋಹನ್ ಭಾಗವತ್ ಸ್ವಲ್ಪ ತಾಳ್ಮೆಯಿಂದಿರಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದಿದ್ದಾರೆ. ಹಾಗಾಗಿ, ಈ ಚುನಾವಣೆ ಎರಡನೇ ಸ್ವಾತಂತ್ರ್ಯದ ಹೋರಾಟ" ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.
"ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆದಿದೆ. ಮೊದಲ ಹಂತದಲ್ಲಿ 8-9 ಸ್ಥಾನ ಗೆಲ್ಲುವ ಮಾಹಿತಿಯಿದೆ. ಎರಡನೇ ಹಂತದಲ್ಲಿ 10ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದು, ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರ ಗೆಲ್ಲಲಿದ್ದೇವೆ. ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಐದೂ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಹಾಗಾಗಿ, ನಮ್ಮ ಮೇಲೆ ಜನರಿಗೆ ವಿಶ್ವಾಸ ಮತ್ತು ನಂಬಿಕೆ ಬಂದಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಚಿವರಾದ ಎಚ್.ಸಿ.ಮಹಾದೇವಪ್ಪ, ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಸೇರಿ ಮತ್ತಿತರು ಇದ್ದರು.
ಇದನ್ನೂ ಓದಿ: ಹುಬ್ಬಳ್ಳಿ: ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ FIR ದಾಖಲು - Dingaleshwara Swamiji