ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಅಂಕಿತ ಹಾಗು ತೃತೀಯ ಸ್ಥಾನಗಳಿಸಿದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸನ್ಮಾನಿಸಿದರು.
ಅಂಕಿತ ಮತ್ತು ನವನೀತ್ ಸಾಧನೆಗೆ ಮೆಚ್ವುಗೆ ವ್ಯಕ್ತಪಡಿಸಿದ ಸಿಎಂ, ವಿದ್ಯಾರ್ಥಿಗಳ ಪೋಷಕರನ್ನೂ ಅಭಿನಂದಿಸಿ, ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಿ ಸಾಗಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಭವಿಷ್ಯದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗು ನವನೀತ್ಗೆ 3 ಲಕ್ಷ ರೂ.ಗಳ ಹಣಕಾಸು ನೆರವು ಪ್ರಕಟಿಸಿದರು.
ಗ್ರಾಮೀಣ ಮಕ್ಕಳು ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡುವಂತಾಗಲಿ. ಈ ಮಕ್ಕಳು ಓದಿದ ಶಾಲೆ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಸ್ಪೂರ್ತಿ ತುಂಬಲಿ ಎಂದು ತಿಳಿಸಿದ ಸಿಎಂ, ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದರು.
ಮುಖ್ಯಮಂತ್ರಿಗಳಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅಂಕಿತ, "ಸರ್, ನಿಮ್ಮ ಸಾಧನೆಗಳು, ನಿಮ್ಮ ಮಾತುಗಳು ನನ್ನ ಈ ಯಶಸ್ಸಿಗೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡಿದವು" ಎಂದರು. ಇದೇ ವೇಳೆ, ಐಎಎಸ್ ಅಧಿಕಾರಿ ಆಗುವ ಬಯಕೆ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಾ ಅಂಕಿತಾ ಮತ್ತು ನವನೀತ್ ಅವರನ್ನು ಅಭಿನಂದಿಸಿದ್ದು, 5 ಹಾಗೂ 2 ಲಕ್ಷ ರೂ ಪ್ರೋತ್ಸಾಹಧನ ಘೋಷಿಸಿದ್ದಾರೆ.