ಬೆಂಗಳೂರು: ನ್ಯಾಯಾಲಯ ನೀಡಿದ್ದ ಮಧ್ಯಂತರ ಆದೇಶದ ನಡುವೆಯೂ ಅರಣ್ಯ ಒತ್ತುವರಿ ಆರೋಪದಡಿ ಸಾಗುವಳಿ ಚೀಟಿ ಹೊಂದಿದ ರೈತರ ಮಾವಿನ ತೋಪುಗಳನ್ನು ತೆರವುಗೊಳಿಸಿದ ಆರೋಪಕ್ಕೆ ಗುರಿಯಾಗಿರುವ ಕೋಲಾರ ಜಿಲ್ಲೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಏಡುಕೊಂಡಲ ಮತ್ತು ವಲಯ ಅರಣ್ಯಾಧಿಕಾರಿಗೆ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ಕೋಲಾರ ಜಿಲ್ಲೆಯ ಉಪ್ಪಾರಪಲ್ಲಿಯ ನಿವಾಸಿ ಗುಲ್ಜಾರ್ ಪಾಷಾ ಎಂಬುವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ, ಒತ್ತುವರಿ ಆರೋಪದಡಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿ ಏಡುಕೊಂಡಲು ಮತ್ತು ಅನಿಲ್ ಕುಮಾರ್ ಅವರು ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯ ಪೀಠಕ್ಕೆ ತಿಳಿಸಿದರು.
ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ ಮುಂದಿನ ವಿಚಾರಣೆ ವೇಳೆಗೆ ಇಬ್ಬರೂ ಅಧಿಕಾರಿಗಳು ಕೋರ್ಟ್‌ಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದಲ್ಲಿ ಪ್ರತಿವಾದಿಗಳಾಗಿರುವ ಅರಣ್ಯ ಅಧಿಕಾರಿಗಳು ಹೈಕೋರ್ಟ್ ಆದೇಶ ಉಲ್ಲಂಘಿಸಿ ಶ್ರೀನಿವಾಸಪುರ ತಾಲೂಕಿನ ಪಾಳ್ಯ, ಯಲವಳ್ಳಿ, ಕೇತಗಾನಹಳ್ಳಿ ಸೇರಿ ವಿವಿಧ ಹಳ್ಳಿಗಳಲ್ಲಿನ 1 ಲಕ್ಷ 30 ಸಾವಿರಕ್ಕೂ ಹೆಚ್ಚಿನ ಮರಗಳನ್ನು ಕಡಿಯಲು ಕಾರಣವಾಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
ಇದನ್ನೂ ಓದಿ: ಕಾನೂನು ಪದವಿ ಪಡೆದಿದ್ದ ಸರ್ಕಾರಿ ನೌಕರನಿಗೆ ಪ್ರಮಾಣ ಪತ್ರ ನೀಡಲು ಹೈಕೋರ್ಟ್ ಸೂಚನೆ