ಹುಬ್ಬಳ್ಳಿ : ಸರ್ಕಾರಿ ಹಾಗೂ ಸರ್ಕಾರಿ ಸಹಭಾಗಿತ್ವದ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಸರಿಯಾದ ಮೂಲ ಸೌಕರ್ಯ, ಉತ್ತಮ ಚಿಕಿತ್ಸೆ ಲಭ್ಯವಿಲ್ಲ ಎಂಬ ಆರೋಪಗಳು ಸಾಮಾನ್ಯ. ಆದರೆ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಅಡಿ ಕಾರ್ಯನಿರ್ವಹಿಸುವ ಚಿಟಗುಪ್ಪಿ ಆಸ್ಪತ್ರೆ ಇದಕ್ಕೆ ಅಪವಾದ ಎಂಬಂತಿದೆ.
ಈ ಆಸ್ಪತ್ರೆ ಬಡರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದು ನಿಂತಿದೆ. ಸ್ವಚ್ಛತೆ, ಸೇವೆಯಲ್ಲಿ ಚಿಟಗುಪ್ಪಿ ಸರ್ಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ. ಇದಕ್ಕೆ ಉತ್ತಮ ವೈದ್ಯಕೀಯ ಸೌಲಭ್ಯ ಕಾರಣವಾಗಿದ್ದು, ದಿನದಿಂದ ದಿನಕ್ಕೆ ಚಿಕಿತ್ಸೆಗಾಗಿ ಆಗಮಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ನೂರಾರು ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮೂಲಕ ಮಾದರಿ: ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಶ್ರಮ ಹಾಗೂ ಅವರ ವೈದ್ಯಕೀಯ ತಂಡ ಸೇವೆಯಿಂದ ನೂರಾರು ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವುದರಿಂದಾಗಿ, ಈ ಆಸ್ಪತ್ರೆ ಬಡ ರೋಗಿಗಳ ಪಾಲಿನ ಸಂಜೀವಿನಿಯಾಗಿದೆ.
ಮುಖ್ಯ ವೈದ್ಯಾಧಿಕಾರಿ ಮಾತುಗಳಿವು: ಈ ಬಗ್ಗೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ್ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ಚಿಟಗುಪ್ಪಿ ಆಸ್ಪತ್ರೆ ಮೊದಲು 30 ಬೆಡ್ ಆಸ್ಪತ್ರೆಯಾಗಿತ್ತು. ಈಗ ನೂರು ಬೆಡ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದಾಗಿನಿಂದಲೂ ಸಾಕಷ್ಟು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇಲ್ಲಿ ಲ್ಯಾಪೋಸ್ಕೋಪಿ ಶಸ್ತ್ರಚಿಕಿತ್ಸೆ ಹೆಚ್ಚಿಗೆ ನಡೆಸಲಾಗುತ್ತದೆ. ಅದರಲ್ಲೂ ಮಹಿಳೆಯರ ಗರ್ಭಚೀಲದ ಆಪರೇಷನ್, ಗಡ್ಡೆಗಳು, ಟ್ಯೂಮರ್ಗಳ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದರು.
ಪ್ರತಿದಿನ ನಾಲ್ಕೈದು ಶಸ್ತ್ರಚಿಕಿತ್ಸೆ : ಅತೀ ಹೆಚ್ಚು ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಸಹಜ ಹೆರಿಗೆ ಹಾಗೂ ಸಿಜರಿಯನ್ ಹೆರಿಗೆ ಮಾಡಲಾಗುತ್ತದೆ. ಈ ಮೊದಲು 25-30 ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿತ್ತು. ಆದ್ರೆ ಈಗ ಪ್ರತಿ ತಿಂಗಳು 140-150 ಹೆರಿಗೆ ಹಾಗೂ 40-50 ಸಿಜರಿಯನ್ ಆಗುತ್ತಿವೆ. ಇದರ ಜೊತೆಗೆ 180-200 ಸಾಮಾನ್ಯ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ನಿತ್ಯ ಸಾಮಾನ್ಯವಾಗಿ ನಾಲ್ಕೈದು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಂಘ, ಸಂಸ್ಥೆಗಳ ನೆರವಿನಿಂದ ನುರಿತ ಹಾಗೂ ಸೇವಾ ಮನೋಭಾವದ ವೈದ್ಯರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಉತ್ತಮ ವೈದ್ಯಕೀಯ ಸೇವೆ ನೀಡುವುದರಲ್ಲಿ ಚಿಟಗುಪ್ಪಿ ಆಸ್ಪತ್ರೆ ಮುಂಚೂಣಿ ಸ್ಥಾನದಲ್ಲಿ ನಿಂತಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಲಭ್ಯವಿರುವುದರಿಂದ ಬಡರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಬಡರೋಗಿಗಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ ಇಲ್ಲಿ ಉಚಿತವಾಗಿ ಉತ್ತಮ ಸೇವೆ ಸಿಗುತ್ತಿದೆ. ಸಹಜ ಹೆರಿಗೆಗಳು 100-110 ಇವೆ ಎಂದರು.
ಆಸ್ಪತ್ರೆಗೆ ಬರುವ ಹೊರ ಹಾಗೂ ಒಳ ರೋಗಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. ಈ ಮೊದಲು 50-60 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈಗ ಪ್ರತಿದಿನ 600 ಜನ ಹೊರ ರೋಗಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈಗ ಡಯಾಬಿಟಿಕ್ ಸೆಂಟರ್ ಪ್ರಾರಂಭಿಸಿದ್ದರಿಂದ ಬಿಪಿ, ಶುಗರ್ ಕಾಯಿಲೆಗೆ ಹೆಚ್ಚಿನ ಜನ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಮಹಿಳೆಯರಿಗೆ ಉಚಿತ ಊಟ: ಎಲ್ಲಾ ಔಷಧಿ ಉಚಿತವಾಗಿ ನೀಡಲಾಗುತ್ತದೆ. ನೂರು ಹಾಸಿಗೆ ಆಸ್ಪತ್ರೆ ಆಗಿದ್ದರಿಂದ ಹಬ್ಬ, ವಿಶೇಷ ದಿನ ಹೊರತುಪಡಿಸಿ ಎಲ್ಲಾ ಹಾಸಿಗೆ ಭರ್ತಿಯಾಗಿರುತ್ತವೆ. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಉಚಿತವಾಗಿ ಊಟ ವಿತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಯಂತೆ ವಿಐಪಿ ಕೊಠಡಿ ತೆರೆಯಲಾಗುತ್ತದೆ ಎಂದು ಡಾ. ಶ್ರೀಧರ ದಂಡೆಪ್ಪನವರ್ ಮಾಹಿತಿ ನೀಡಿದರು.
ಇದನ್ನೂ ಓದಿ : ಚಿಟಗುಪ್ಪಿ ಆಸ್ಪತ್ರೆ ವೈದ್ಯರ ಸಾಧನೆ : ಮೂವರು ಮಹಿಳೆಯರಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಶ್ರೀಧರ