ಚಿಕ್ಕಬಳ್ಳಾಪುರ: ರಾಜ್ಯದ 28 ಲೋಕಸಭಾ ಕ್ಷೇತ್ರದಲ್ಲಿ ಒಂದಾದ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ.ಕೆ.ಸುಧಾಕರ್ ಭರ್ಜರಿ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ನಿಂದ ರಕ್ಷಾ ರಾಮಯ್ಯ ಸ್ಪರ್ಧೆ ಮಾಡಿದ್ದ ಹಿನ್ನೆಲೆ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಮೂಡಿತ್ತು. 1,63,460 ಮತಗಳ ಅಂತರದೊಂದಿಗೆ ಬಿಜೆಪಿಯ ಡಾ.ಕೆ.ಸುಧಾಕರ್ ಜಯ ಸಾಧಿಸಿದ್ದಾರೆ.
- ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ - 8,22,619 ಮತಗಳು.
- ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಹಿನ್ನಡೆ - 6,59,159 ಮತಗಳು.
- ಅಂತರ: 1,63,460 ಮತಗಳು.
ಮೊದಲ ಬಾರಿ ಲೋಕಸಭಾ ಚುನಾವಣಾ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಎದುರು ಸೋಲು ಕಂಡಿದ್ದಾರೆ. ಚುನಾವಣಾ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಮತಯಾಚನೆ ನಡೆಸುವ ವೇಳೆ ಒಬ್ಬರಿಗೊಬ್ಬರು ಹೇಳಿಕೆಗಳನ್ನು ನೀಡುವ ಮೂಲಕ, ವಾಗ್ದಾಳಿ ನಡೆಸುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು. ಉಭಯ ಅಭ್ಯರ್ಥಿ ಪರ ಘಟಾನುಘಟಿಗಳು ಪ್ರಚಾರದಲ್ಲಿ ಭಾಗಿಯಾಗಿದ್ದರು.
ಭದ್ರತೆ: ಫಲಿತಾಂಶದ ಹಿನ್ನೆಲೆ ಮತ ಎಣಿಕೆ ಕೇಂದ್ರ ಮತ್ತು ನಗರದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಮತ ಎಣಿಕೆ ಕೇಂದ್ರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಸಿಪಿಗಳು, ಸಿಪಿಐ, ಪಿಎಸ್ಐ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಎಣಿಕೆ ಕೇಂದ್ರ ಸೇರಿದಂತೆ ಎಲ್ಲಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ತೀವ್ರ ನಿಗಾ ವಹಿಸಲಾಗಿದೆ.
ಮತದಾರರ ಮಾಹಿತಿ: ನಡೆದ ಚುನಾವಣೆಯಲ್ಲಿ ಸೇವಾ ಮತದಾರರು ಸೇರಿದಂತೆ ಕ್ಷೇತ್ರದ ಒಟ್ಟು 19,81,767 ಮತದಾರರಲ್ಲಿ 9,83,775 ಪುರುಷರು, 9,97,306 ಮಹಿಳಾ, 266 ಇತರೆ, 420 ಸೇವಾ ಮತದಾರನ್ನು ಹೊಂದಿತ್ತು. 2019ರಲ್ಲಿ ಚುನಾವಣೆಯಲ್ಲಿ ಶೇ. 71.81ರಷ್ಟು ಮತದಾನದ ಪ್ರಮಾಣವಾಗಿದ್ದರೆ, 2024ರಲ್ಲಿ ನಡೆದ ಚುನಾವಣೆಯಲ್ಲಿ 76.57ರಷ್ಟು ಮತದಾನ ನಡೆದಿದೆ. 14 ಕ್ಷೇತ್ರಗಳು ಒಳಗೊಂಡಂತೆ ರಾಜ್ಯದ ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೂ ಮತದಾನ ನಡೆದಿತ್ತು.
ಇದನ್ನೂ ಓದಿ: ಲೋಕಸಮರ: ಯಾರಿಂದ ಯಾರಿಗೆ ಹೊಡೆತ? ರಾಜ್ಯದ 28 ಕ್ಷೇತ್ರಗಳ ಮಾಹಿತಿ - Lok Sabha Election