ಬೆಂಗಳೂರು: ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿರುವ ಸಿ.ಪಿ.ಯೋಗೇಶ್ವರ್ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ನಾಳೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಚನ್ನಪಟ್ಟಣ ಟಿಕೆಟ್ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಅವರು ಮಾತುಕತೆ ನಡೆಸಲಿದ್ದಾರೆ.
ಹುಬ್ಬಳ್ಳಿಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ಪರಿಷತ್ ಸ್ಥಾನಕ್ಕೆ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡುತ್ತಿದ್ದಂತೆ ಈ ಕುರಿತು ಜಾಲಹಳ್ಳಿ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅಶೋಕ್, ನಾಳೆ ದೆಹಲಿಗೆ ಹೋಗ್ತಿದ್ದೇನೆ. ಚನ್ನಪಟ್ಟಣ ಟಿಕೆಟ್ ಬಗ್ಗೆ ವರಿಷ್ಠರ ಜೊತೆ ಮಾತಾಡ್ತೇನೆ. ಈಗಾಗಲೇ ಸಾಕಷ್ಟು ಬಾರಿ ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲಾಗಿದೆ. ಈಗ ಮತ್ತೊಮ್ಮೆ ಚರ್ಚೆ ನಡೆಸಲಿದ್ದೇನೆ ಎಂದರು.
ಕುಮಾರಸ್ವಾಮಿ ಓಪನ್ ಮೈಂಡ್ನಲ್ಲಿ ಮಾತಾಡಿದ್ದಾರೆ. ಜೆಡಿಸ್ ಚಿಹ್ನೆ ಅಥವಾ ಬಿಜೆಪಿಯಿಂದ ಒಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿ ಆಗಬೇಕು. ಇದಕ್ಕೆ ಕುಮಾರಸ್ವಾಮಿ ಅವರೂ ಒಪ್ಪಿಕೊಂಡಿದ್ದಾರೆ. ಬಿಜೆಪಿ ಜೆಡಿಎಸ್ನಿಂದ ಒಬ್ಬರೇ ಅಭ್ಯರ್ಥಿ ಸ್ಪರ್ಧಿಸುವುದು ಸ್ಪಷ್ಟ. ಯಾರೇ ಆದರೂ ಎನ್‌ಡಿಎ ಅಭ್ಯರ್ಥಿ ಸ್ಪರ್ಧಿಸ್ತಾರೆ. ಯೋಗೇಶ್ವರ್ ಸ್ವಲ್ಪ ಆತುರಪಟ್ಟು ರಾಜೀನಾಮೆಗೆ ಮುಂದಾಗಿರಬಹುದು. ಯೋಗೇಶ್ವರ್ ಜೊತೆಗೂ ಮಾತಾಡ್ತೇನೆ. ನನಗೆ ಬಂದ ಮಾಹಿತಿ ಪ್ರಕಾರ ನಿಖಿಲ್ ಅವರು ಸ್ಪರ್ಧೆ ಮಾಡ್ತಿಲ್ಲ, ಅವರಿಗೂ ಈಗ ಸ್ಪರ್ಧೆ ಬೇಕಾಗಿಲ್ಲ. ನಿಖಿಲ್ ಸ್ಪರ್ಧೆ ಮಾಡುವ ಹಾಗಿದ್ದರೆ ಈಗಾಗಲೇ ಟಿಕೆಟ್ ಅವರಿಗೇ ಘೋಷಣೆ ಆಗ್ತಿತ್ತು. ಟಿಕೆಟ್ ಗೊಂದಲದಿಂದ ಚನ್ನಪಟ್ಟಣ ಭಾಗದಲ್ಲಿ ಬಿಜೆಪಿ ಸಂಘಟನೆಗೆ ಧಕ್ಕೆ ಆಗಲ್ಲ ಎಂದರು.
ಸಿಪಿವೈಗೆ ಡಿಕೆಶಿ ಗಾಳ ಹಾಕಿದ್ದಾರೆಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಕಾಂಗ್ರೆಸ್ನವ್ರು ಯಾರ್ಯಾರನ್ನು ಸೆಳೀತಾರೆ ಅಂತ ಹೇಳಕ್ಕಾಗಲ್ಲ. ಅವರು ಸಮಯ ಸಾಧಕರಿದ್ದ ಹಾಗೆ. ನಮಗೆ ಈಗ ಮುಖ್ಯವಾಗಿರೋದು ಎನ್‌ಡಿಎ ಅಭ್ಯರ್ಥಿಯ ಆಯ್ಕೆ, ಇದರ ಬಗ್ಗೆ ಗಮನ ಕೊಟ್ಟಿದ್ದೀವಿ ಎಂದು ಪ್ರತಿಕ್ರಿಯೆ ನೀಡಿದರು.
ಪರಮೇಶ್ವರ್ ಅವರನ್ನು ರೋಷನ್ ಬೇಗ್ ಭೇಟಿ ಮಾಡಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ನಲ್ಲಿ ಅಮಾಯಕರ ಕೇಸ್ ವಾಪಸ್ಗೆ ಮನವಿ ಮಾಡಿರುವ ವಿಚಾರ ಖಂಡನೀಯ. ಡಿಜೆ ಹಳ್ಳಿ ಕೆಜಿ ಹಳ್ಳಿ ಘಟನೆ ನಡೆದಿದ್ದು ಅತಿ ಭೀಕರ ಘಟನೆ. ಬೆಂಕಿ ಹಾಕಿದ್ದಾರೆ, ಕಲ್ಲೆಸೆದಿದ್ದಾರೆ ಇವರು ಹೇಗೆ ಅಮಾಯಕರಾಗ್ತಾರೆ? ಅಪರಾಧ ಕೃತ್ಯ ಮಾಡೋರ ಕೇಸ್ ವಾಪಸ್ ತಗೋತಾರೆ ಅಂದ್ರೆ ಕಾನೂನು ಏಕೆ ಬೇಕು? ಪೊಲೀಸ್ ಏಕೆ ಬೇಕು? ಡಿಜೆ ಹಳ್ಳಿ ಕೆಜಿ ಹಳ್ಳಿಯಲ್ಲಿ ನಡೆದಿರೋದು ದೇಶದ್ರೋಹದ ಕೆಲಸ. ಯಾರೇ ಕೇಸ್ ವಾಪಸ್ ಪಡೆಯಿರಿ ಅಂದ್ರೂ ನಾವು ವಿರೋಧ ಮಾಡ್ತೀವಿ. ಹುಬ್ಬಳ್ಳಿ ಕೇಸ್ ವಾಪಸ್ ವಿರುದ್ಧ ಈಗಾಗಲೇ ಹೋರಾಟ ಮಾಡ್ತಿದ್ದೀವಿ. ಈಗ ಈ ಕೇಸ್ಗಳನ್ನೂ ವಾಪಸ್ ಪಡೆದರೆ ಹೋರಾಟ ಮಾಡೇ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ಪಿ ಯೋಗೇಶ್ವರ್; ಸ್ವತಂತ್ರ ಸ್ಪರ್ಧೆಗೆ ಸೈನಿಕನ ಇಂಗಿತ