ಹುಬ್ಬಳ್ಳಿ: ನಗರದ ಚನ್ನಮ್ಮ ಸರ್ಕಲ್ ಬಳಿ ಫ್ಲೈ ಓವರ್ ಕಾಮಗಾರಿ ಪ್ರಾರಂಭಗೊಂಡಿದ್ದು, ಸುಗಮ ಸಂಚಾರದ ಹಿತದೃಷ್ಟಿಯಿಂದ ಹುಬ್ಬಳ್ಳಿ ಶಹರದಲ್ಲಿ ವಾಹನಗಳಿಗೆ ಫೆಬ್ರವರಿ 10 ರಿಂದ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ.
ಹೊಸೂರು ಸರ್ಕಲ್ನಿಂದ ಗದಗ ಕಡೆಗೆ ಸಂಚರಿಸುವ ಬಸ್, ಭಾರಿ ಗಾತ್ರದ ಹಾಗೂ ಇತರೆ ವಾಹನಗಳು ಬಸವವನ, ಹಳೇ ಬಸ್ ಸ್ಟ್ಯಾಂಡ್ - ಅಯೋಧ್ಯಾ ಹೋಟೆಲ್ ಮುಂದೆ ಹಾಯ್ದು, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮೂಲಕ ಗದಗ ರಸ್ತೆಗೆ ಹೋಗಬಹುದು. ಅಲ್ಲದೆ, ಹೊಸೂರು ಸರ್ಕಲ್ನಿಂದ ವಿಜಯಪುರ ರಸ್ತೆಯತ್ತ ಸಂಚರಿಸುವ ವಾಹನಗಳು ಬೆಂಬಳಗಿ ಕ್ರಾಸ್, ಬಾಳಿಗಾ ಕ್ರಾಸ್ - ಹುಬ್ಬಳ್ಳಿ ಸ್ಕ್ಯಾನ್ ಸೆಂಟರ್ ಹತ್ತಿರ ಎಡಕ್ಕೆ ತಿರುಗಿ, ದೇಸಾಯಿ ಓವರ್ ಬ್ರಿಡ್ಜ್ ಮುಖಾಂತರ ತೆರಳಬಹುದು.
ವಿಜಯಪುರ ರಸ್ತೆಗೆ ಹೊಸೂರು ಸರ್ಕಲ್ ಕಡೆಯಿಂದ ತೆರಳುವ ಭಾರಿ ಗಾತ್ರದ ವಾಹನಗಳು ಹಳೇ ಬಸ್ ಸ್ಟ್ಯಾಂಡ್ - ಅಯೋಧ್ಯಾ ಹೋಟೆಲ್ ಮುಂದೆ ಹಾಯ್ದು, ಚನ್ನಮ್ಮ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಪಿಂಟೋ ಸರ್ಕಲ್ ಮುಖಾಂತರ ಗದಗ ರಿಂಗ್ ರೋಡ್ ಮೂಲಕ ಹೋಗಬೇಕು. ನವಲಗುಂದ, ವಿಜಯಪುರ ಕಡೆಯಿಂದ ಹುಬ್ಬಳ್ಳಿಗೆ ಬರುವ ಬಸ್‌ಗಳು ಸರ್ವೋದಯ ಸರ್ಕಲ್, ಕೆ.ಹೆಚ್. ಪಾಟೀಲ್ ರೋಡ್, ಶೃಂಗಾರ ಹೋಟೆಲ್ ಕ್ರಾಸ್ನಲ್ಲಿ ಎಡ ತಿರುವು ಪಡೆದು, ಮುಂದೆ ಗದಗ ರಸ್ತೆಗೆ ಬಂದು ತಲುಪಬಹುದು.
ಕೋರ್ಟ್ ಸರ್ಕಲ್ ಕಡೆಯಿಂದ ಚನ್ನಮ್ಮ ಸರ್ಕಲ್‌ಗೆ ಬರುವ ವಾಹನ ಸವಾರರು ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ, ಚಿಟಗುಪ್ಪಿ ಸರ್ಕಲ್‌ನಲ್ಲಿ ಯು-ಟರ್ಸ್ ಪಡೆದು ಚನ್ನಮ್ಮ ಸರ್ಕಲ್ ಹತ್ತಿರ ಬರಬಹುದು. ಸರ್ವೋದಯ ಸರ್ಕಲ್ ಕಡೆಯಿಂದ ಕಾರವಾರ ರೋಡ್ ಕಡೆಗೆ ಹೋಗುವ ವಾಹನಗಳು ದೇಸಾಯಿ ಅಂಡರ್ ಬ್ರಿಡ್ಜ್, ಬಾಳಿಗಾ ಕ್ರಾಸ್, ಉತ್ತರ ಸಂಚಾರ ಪೊಲೀಸ್ ಠಾಣೆ ಮುಂದೆ ಹಾಯ್ದು, ಗ್ಲಾಸ್ ಹೌಸ್ ರೋಡ್ ಮೂಲಕ ಕಾರವಾರ ರಸ್ತೆಗೆ ಬರಬಹುದು.
ನವಲಗುಂದ ಹಾಗೂ ಗದಗ ಕಡೆಯಿಂದ ಬರುವ ಭಾರಿ ಮತ್ತು ಸರಕು ವಾಹನಗಳು ಹುಬ್ಬಳ್ಳಿ ನಗರವನ್ನು ಪ್ರವೇಶಿಸದೆ, ರಿಂಗ್ ರೋಡ್ ಮೂಲಕ ಬೆಂಗಳೂರು ಹಾಗೂ ಕಾರವಾರ ಕಡೆಗೆ ಹೋಗಬೇಕು. ಹಾಗೆಯೇ, ಇದೇ ಮಾರ್ಗದಿಂದ ಹುಬ್ಬಳ್ಳಿಗೆ ಪ್ರವೇಶಿಸುವ ಭಾರಿ ಮತ್ತು ಸರಕು ವಾಹನಗಳು ರಿಂಗ್ ರೋಡ್ ಮುಖಾಂತರ ಗಟ್ಟೂರು ಸರ್ಕಲ್‌ಗೆ ಹೋಗಿ, ಅಲ್ಲಿಂದ ಹಳೇ ಪಿಬಿ ರೋಡ್ ಅಥವಾ ಕಾರವಾರ ರಸ್ತೆಗೆ ತಲುಪಬಹುದಾಗಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ರೀತಿ ಬದಲಿ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಸಹಕರಿಸುವಂತೆ ಸಂಚಾರ ಪೊಲೀಸರ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಇನ್ಮುಂದೆ ಬೆಂಗಳೂರನ್ನು 'ಟ್ರಾಫಿಕ್ ಸಿಟಿ' ಎನ್ನಬೇಡಿ; ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೊಲೀಸರು ಕೈಗೊಂಡ ಕ್ರಮಗಳಿವು