ಚಾಮರಾಜನಗರ: ಇಲ್ಲಿನ ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ಸಚಿವರು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸುತ್ತಿದ್ದ ವೇಳೆಯೇ ವಿದ್ಯುತ್ ಕೈಕೊಟ್ಟ ಘಟನೆ ನಡೆದಿದೆ. ಹೀಗಾಗಿ ಕತ್ತಲಲ್ಲಿಯೇ ಕೆಡಿಪಿ ಸಭೆ ನಡೆಯಿತು.
ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಸಚಿವರು ಆ್ಯಕ್ಟಿವ್ ಆಗಿದ್ದು, ಸಚಿವರಾದ ಕೆ.ವೆಂಕಟೇಶ್, ಡಾ.ಹೆಚ್.ಸಿ. ಮಹದೇವಪ್ಪ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದರು. ಈ ವೇಳೆ, ಬೆಳಗ್ಗೆ 10.50ರ ಹೊತ್ತಿಗೆ ವಿದ್ಯುತ್ ಹೋಗಿದ್ದು, 11.30 ಗಂಟೆ ಆದರೂ ಬಾರದೇ ಕತ್ತಲಲ್ಲೇ ಸಭೆ ನಡೆಸಲಾಯಿತು.
ಬಳಿಕ, ಸಚಿವ ಮಹಾದೇವಪ್ಪ ವಿದ್ಯುತ್ ನಿರ್ವಹಣೆ ಮಾಡುವುದು ಯಾರು? ಎಂದು ಕೇಳಿ, ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಆ ಬಳಿಕ ಜನರೇಟರ್ ವ್ಯವಸ್ಥೆ ಮಾಡಿ ಎರಡು ಫೋಕಸ್ ಲೈಟ್ ಮೂಲಕ ಬೆಳಕು ಹರಿಸಲಾಯಿತು.
ಅಧಿಕಾರಿಗಳಿಗೆ ತರಾಟೆ: ಬಿಳಿಗಿರಿರಂಗನ ಬೆಟ್ಟದ ಗಿರಿಜನರಿಗೆ ನೀರು ಕೊಡುವ ವಿಚಾರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಡಾ.ಎಚ್.ಸಿ.ಮಹಾದೇವಪ್ಪ, ಬಿಆರ್ಟಿ ಡಿಸಿಎಫ್ ದೀಪ್ ಜೆ. ಕಾಂಟ್ರಾಕ್ಟರ್ ವಿರುದ್ಧ ಹರಿಹಾಯ್ದರು.
ನೀರು ಕೊಡಲು ಪೈಪ್ ಲೈನ್ಗೆ ಅವಕಾಶ ಕೊಡದೇ ಡಿಸಿಎಫ್ ದೀಪಾ ತಗಾದೆ ತೆಗೆಯುತ್ತಿದ್ದಾರೆ ಎಂದು ಶಾಸಕರು ಆರೋಪಿಸಿ ತರಾಟೆಗೆ ತೆಗೆದುಕೊಂಡರು. ಹಿಂದಿನಿಂದಲೂ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಆದರೆ, ಪೈಪ್ ಸರಿಪಡಿಸುವ ಕೆಲಸಕ್ಕೂ ಬಿಡದೇ ತೊಂದರೆ ಕೊಡುತ್ತಿದ್ದಾರೆ. ನಮ್ಮ ಮಾತು ಸಹ ಕೇಳುತ್ತಿಲ್ಲ ಎಂದು ಡಿಸಿಎಫ್ ವಿರುದ್ಧ ಸಚಿವರ ಎದುರೇ ಶಾಸಕರು ಆಕ್ರೋಶ ಹೊರಹಾಕಿದರು.
ಬಳಿಕ ಸಚಿವ ಕೆ.ವೆಂಕಟೇಶ್ ಮಧ್ಯ ಪ್ರವೇಶಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸೋಣ ಎಂದರು. ಸಭೆಯಲ್ಲಿ ಡಿಹೆಚ್ಒ, ಗ್ರಾಮೀಣ ಕುಡಿಯುವ ನೀರು ಅಧಿಕಾರಿ ಹಾಗೂ ಚಾಮರಾಜನಗರ ನಗರಸಭೆ ಆಯುಕ್ತರು ಸೇರಿದಂತೆ ಹಲವರಿಗೆ ಸಚಿವರು ಖಡಕ್ ಸೂಚನೆಗಳನ್ನು ನೀಡಿದರು.
ಇದನ್ನೂ ಓದಿ: ಗಂಗಾವತಿ: ಮಹೀಂದ್ರಾ ಶೋರೂಂಗೆ ಬೆಂಕಿ; 5 ಟ್ರ್ಯಾಕ್ಟರ್ ಸೇರಿ ಅಪಾರ ಹಾನಿ - Tractors Fire