ಬೆಂಗಳೂರು: ಯುವ ಸಮೂಹ, ಆನ್‌ಲೈನ್ ಗೇಮ್‌ಗಳ ಸುಳಿಯಲ್ಲಿ ಸಿಲುಕಿದೆ. ಇದರಿಂದ ಕೆಲ ಕುಟುಂಬಗಳು ಬೀದಿಗೆ ಬಿದ್ದಿವೆ. ಸಾಮಾಜಿಕವಾಗಿಯೂ ಭಾರೀ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ದೇಶದಲ್ಲಿ ಆನ್‌ಲೈನ್ ಗೇಮ್ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ ಜೊತೆಗೆ ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಚರ್ಚೆ ಮಾಡಲು ಸಮಯಾವಕಾಶ ನೀಡುವಂತೆ ಕೋರಿದ್ದಾರೆ.
ಅನೇಕ ಯುವಕರು ಈ ಆನ್‌ಲೈನ್ ಆಟಗಳಿಗೆ ವ್ಯಸನಿಯಾಗುವುದನ್ನು ನಾನು ನೋಡಿದ್ದೇನೆ. ಮತ್ತು ಈ ಆನ್‌ಲೈನ್ ಆಟಗಳ ವ್ಯಸನದ ಪರಿಣಾಮ ಕುಟುಂಬಗಳು ಬೀದಿಗೆ ಬಂದಿವೆ ಮತ್ತು ದುರಂತ ಅಂತ್ಯವನ್ನು ಕಾಣುತ್ತಿವೆ. ಅನೇಕ ಕುಟುಂಬಗಳು ಸಾಲದ ಸುಳಿಗೆ ಸಿಲುಕಿದ್ದು, ಈ ಆನ್‌ಲೈನ್ ಆಟಗಳಿಂದ ಕುಟುಂಬದಲ್ಲಿನ ಸಾಮರಸ್ಯವು ಕಳೆದುಹೋಗಿದೆ. ಈ ಗೇಮ್‌ಗಳ ಮಾಲೀಕರು/ಸಂಸ್ಥಾಪಕರು ಕಾಸ್ಮೋಪಾಲಿಟನ್ ನಗರಗಳು ಮತ್ತು ವಿದೇಶಗಳಲ್ಲಿ ಕುಳಿತು ಐಷಾರಾಮಿ ಜೀವನವನ್ನು ನಡೆಸುತ್ತಾ ಆನಂದಿಸುತ್ತಿರುವಾಗ ಈ ಆಟಗಳು/ಆ್ಯಪ್‌ಗಳಿಗೆ ಬಲಿಯಾಗಿ ಬಳಲುತ್ತಿರುವವರು ಮಾತ್ರ ಜನ ಸಾಮಾನ್ಯರು ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯ ರದ್ದತಿ ಮತ್ತು ಇತರ ಪ್ರಮುಖ ಶಾಸನಗಳನ್ನು ತರುವಲ್ಲಿ ನಿಮ್ಮ ಧೈರ್ಯಶಾಲಿ ಹೆಜ್ಜೆಯಂತೆಯೇ ನಾನು ಈ ವಿಷಯದ ಬಗ್ಗೆ ನಿಮ್ಮ ವೈಯಕ್ತಿಕ ಗಮನವನ್ನು ಆನ್ ಲೈನ್ ಗೇಮಿಂಗ್ ದುಷ್ಪರಿಣಾಮಗಳ ಬಗ್ಗೆಯೂ ಹರಿಸಿ ಎಂದು ಕೋರುತ್ತೇನೆ. ದೇಶಾದ್ಯಂತ ಹೊಸ ಸಾಮಾಜಿಕ ಪಿಡುಗು ಎಂದು ಸಾಬೀತಾಗಿರುವ ಇಂತಹ ಆಪ್‌ಗಳ ಮಾಲೀಕರು/ಸಂಸ್ಥಾಪಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಾನು ಈ ಮೂಲಕ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಆನ್ ಲೈನ್ ಗೇಮಿಂಗ್ ವಿಷಯ ಮತ್ತು ನಮ್ಮ ರಾಜ್ಯಕ್ಕೆ ಸಂಬಂಧಿಸಿದ ಇತರ ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸಿಲು ಮುಂದಿನ ದಿನಗಳಲ್ಲಿ ತಮ್ಮನ್ನು ಭೇಟಿ ಮಾಡಲು ನಾನು ಎದುರು ನೋಡುತ್ತೇನೆ ಎಂದು ಭೇಟಿಗೆ ಸಮಾವಕಾಶವನ್ನು ಛಲವಾದಿ ನಾರಾಯಣಸ್ವಾಮಿ ಕೋರಿದ್ದಾರೆ.