ಬೆಂಗಳೂರು: ವಾಲ್ಮೀಕಿ ಹಗರಣದ ಪ್ರಮುಖ ರೂವಾರಿ ನಾಗೇಂದ್ರ ಎಂದು ಇ.ಡಿ. ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಸಿಎಂ ಹಣಕಾಸು ಸಚಿವರಾಗಿದ್ದುಕೊಂಡು ಇಷ್ಟು ಹಣ ಖರ್ಚಾಗಿದ್ದು ಗೊತ್ತಾಗಿಲ್ಲ ಎಂದರೆ ಹೇಗೆ?. ಹಾಗಾಗಿ ಮುಡಾ, ವಾಲ್ಮೀಕಿ ಎರಡೂ ಕೇಸ್‍ಗಳು ರಾಜ್ಯದ ಮುಖ್ಯಮಂತ್ರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದನ್ನು ರುಜುವಾತು ಮಾಡಿವೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿಂದು ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಹಗರಣಗಳಲ್ಲಿ ಕ್ಲೀನ್‌ಚಿಟ್ ಪಡೆಯಲು ಎಸ್‍ಐಟಿ, ಸಿಐಡಿಯನ್ನು ನೇಮಿಸಿ ಅದರಿಂದ ಬಚಾವ್ ಆಗಲು ಸಾಹಸ ನಡೆಸಿತು. ಇ.ಡಿ. ತನಿಖೆಗೆ ಮುಂದಾಗದಿದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು. 187 ಕೋಟಿ ರೂ ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಯವರು ಅಂದೇ ಹೇಳಿದ್ದರೂ ಕ್ರಮ ಆಗಿರಲಿಲ್ಲ. ಇದರಲ್ಲಿ 20 ಕೋಟಿ ರೂ ಹಣವನ್ನು ತುಕಾರಾಂ ಅವರ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ನಾಗೇಂದ್ರರ ವೈಯಕ್ತಿಕ ವೆಚ್ಚವಾಗಿ ಹಣ ಖರ್ಚಾದುದರ ಕುರಿತು ಇ.ಡಿ. ವರದಿಯಲ್ಲಿ ಉಲ್ಲೇಖವಿದೆ. ಇದಕ್ಕೆ ಸಿಎಂ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗೆ ಕಿಂಚಿತ್ತಾದರೂ ಆತ್ಮಗೌರವ ಇದ್ದು, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಇಷ್ಟೊತ್ತಿಗಾಗಲೇ ರಾಜೀನಾಮೆ ಕೊಡಬೇಕಿತ್ತು. ಮುಡಾ ಮಾದರಿಯಲ್ಲೇ ವಾಲ್ಮೀಕಿ ನಿಗಮದ ಹಗರಣದ ಸತ್ಯಾಂಶವನ್ನು ಮುಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ದೂರಿದರು.
14 ಸೈಟ್ ಪಡೆದುದೇ ತಪ್ಪೆಂದು ನ್ಯಾಯಾಲಯ ಹೇಳಿದರೆ, ಅಲ್ಲಿ ಜಮೀನೇ ಇಲ್ಲ, ಹೇಗೆ ಸೈಟ್ ಪಡೆದಿರಿ ಎಂದು ಇನ್ನೊಂದು ಕೋರ್ಟ್ ಹೇಳಿದೆ. ಮುಖ್ಯಮಂತ್ರಿಗಳು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ರಾಜೀನಾಮೆ ಕೊಟ್ಟು ಹೋಗಲಿ ಎಂದರು.
ಜಾರಿ ನಿರ್ದೇಶನಾಲಯ ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವರದಿ ಒಪ್ಪಿಸಿದೆ. ಹಗರಣದಲ್ಲಿ ಬಿ.ನಾಗೇಂದ್ರ ಮಾಸ್ಟರ್ ಮೈಂಡ್ ಎಂದಿದೆ. ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯನ್ನೂ ಹೊಂದಿದ್ದು ಅವರಿಗೆ ಗೊತ್ತಿಲ್ಲದೇ ಆಗುವುದಿಲ್ಲ. ವರದಿಯಲ್ಲಿ 24 ಜನರ ಹೆಸರುಗಳಿವೆ. ಮುಖ್ಯಮಂತ್ರಿಗಳು ಹಗರಣ ಮುಚ್ಚಿ ಹಾಕಲು ಎಸ್‍ಐಟಿಗೆ ಕೊಟ್ಟು ಅಲ್ಲಿ ನಾಗೇಂದ್ರರ ಹೆಸರು ಪ್ರಸ್ತಾಪ ಆಗದಂತೆ ನೋಡಿಕೊಂಡಿದ್ದಾರೆ ಎಂದು ಹೇಳಿದರು.
ಹರಿಯಾಣ ಮತ್ತು ಜಮ್ಮು-ಕಾಶ್ಮೀರದ ಚುನಾವಣೆ ಮೂಲಕ ಮೋದಿ ನಾಯಕತ್ವ ನಮಗೆ ಬೇಕು ಎಂದು ಜನರು ತೋರಿಸಿದ್ದಾರೆ. ಹರಿಯಾಣದ ಜಿಲೇಬಿ ಕಾಂಗ್ರೆಸ್ ತಟ್ಟೆಗೆ ಬೀಳಲಿದೆ ಎಂಬ ಕನಸು ಭಗ್ನವಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ದುರಾಡಳಿತ, ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣಗಳು, ಮತ್ತು ಭ್ರಷ್ಟಾಚಾರದ ಆರೋಪಗಳು ಸೋಲಿಗೆ ಪ್ರಮುಖ ಕಾರಣವಾಗಿವೆ. ಜಮ್ಮು- ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಆರು ಸೀಟಿಗೆ ಇಳಿದಿದೆ. ಇಂದಿನ ಕಾಂಗ್ರೆಸ್ಸಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಶಿವಮೊಗ್ಗದಿಂದ ಚೆನ್ನೈ, ಹೈದರಾಬಾದ್ಗೆ ಸ್ಪೈಸ್ಜೆಟ್ ವಿಮಾನಯಾನ ಆರಂಭ