ಶಿವಮೊಗ್ಗ: ರಾಜ್ಯ ಸರ್ಕಾರ ಮಾಂಟೆಸ್ಸರಿಗೆ ಚಾಲನೆ ನೀಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ಶಹಬ್ಬಾಸ್ಗಿರಿ ಕೊಟ್ಟಿದೆ. ಇದಕ್ಕೆ ಸಹಕಾರ ನೀಡುತ್ತೇವೆ ಎಂದು ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ಭದ್ರಾವತಿ ತಾಲೂಕಿನ ಬಿಆರ್ಪಿಯಲ್ಲಿ ಸಚಿವ ಮಧು ಬಂಗಾರಪ್ಪ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರೊಂದಿಗೆ ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಅಂಗನವಾಡಿಯನ್ನು ಮಾಂಟೆಸ್ಸರಿಯನ್ನಾಗಿ ಮಾಡಲಾಗಿದೆ. ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಎರಡು ಸೇರಿ ಅಂಗನವಾಡಿಯಲ್ಲಿ ಮಕ್ಕಳಿಗೆ ಮೂಲಭೂತ ಸೌಕರ್ಯ ಇರಬೇಕು ಹಾಗೂ ಇಲ್ಲಿನ ಶಿಕ್ಷಣ ಗುಣಮಟ್ಟದ್ದಾಗಿರಬೇಕು ಎಂದು ಇದಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜ್ಯದಲ್ಲಿ 17,800 ಅಂಗನವಾಡಿಯನ್ನು ಗುರುತಿಸಲಾಗುತ್ತಿದೆ. ಇಲ್ಲಿ ಎರಡು ರೂಂ ಇರಬೇಕು. ಅಡುಗೆ ಮನೆ ಇರಬೇಕು. ಕಾಂಪೌಡ್ ಇರಬೇಕು. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ 250 ಮಾಂಟೆಸ್ಸರಿಗಳಿಗೆ ಚಾಲನೆ ನೀಡಿದ್ದೇವೆ. ಉಳಿದ ಕಡೆ ಪ್ರಾರಂಭಿಸುವುದಕ್ಕೆ ಸರ್ಕಾರದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದರು.
![ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್](https://etvbharatimages.akamaized.net/etvbharat/prod-images/11-08-2024/22180659_thumb.jpg)
ಕೇಂದ್ರ ಸರ್ಕಾರ 17,800 ಅಂಗನವಾಡಿಗಳನ್ನು ಸಕ್ಷಮ ಅಂಗನವಾಡಿ ಎಂದು ಗುರುತಿಸಿದೆ. ಈ ಅಂಗನವಾಡಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಯೋಜನೆಯನ್ನು ಕೇಂದ್ರವು ಒಪ್ಪಿಕೊಂಡಿದ್ದು, ಕೇಂದ್ರದ ಸಚಿವೆ ಅನ್ನಪೂರ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಮೊದಲ ಬಾರಿ ಭದ್ರೆಗೆ ಬಾಗಿನ ಅರ್ಪಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ ಮಳೆ ಆಗಿದೆ. ಇದರಿಂದ ಕೆರೆ, ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಕರ್ನಾಟಕ ಸಮೃದ್ಧಿಯಾಗುತ್ತಿದೆ. ತುಂಗಭದ್ರಾ ಅಣೆಕಟ್ಟೆಯ ಗೇಟ್ ಸಮಸ್ಯೆಯಿಂದ ನದಿಗೆ ನೀರು ಹರಿದು ಹೋಗುತ್ತಿದೆ. ಸಿಎಂ ಸೂಚನೆ ಮೇರೆಗೆ ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನೀರು ತಡೆಯಲು ಎಲ್ಲಾ ಪ್ರಯತ್ನ ನಡೆಸಲಾಗುತ್ತದೆ. ಇದಕ್ಕೆ ಅಧಿಕಾರಿಗಳ ಕರ್ತವ್ಯಲೋಪ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಎಲ್ಲದಕ್ಕೂ ಅಧಿಕಾರಿಗಳನ್ನು ಹೊಣೆಯನ್ನಾಗಿ ಮಾಡುತ್ತಿರುವುದು ಸರಿಯಲ್ಲ ಎಂದರು.
ಭಾಗ್ಯಲಕ್ಷ್ಮೀ ಬಾಂಡ್ ಸ್ಥಗಿತಗೊಂಡಿಲ್ಲ: ಭಾಗ್ಯಲಕ್ಷ್ಮಿ ಬಾಂಡ್ ಸ್ಥಗಿತಗೊಳಿಸಿಲ್ಲ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ನಿರಂತರವಾಗಿ ನಡೆಯಲಿದೆ. ಮಗುವಿಗೆ 21 ವರ್ಷ ಮುಗಿದ ಬಳಿಕ ಬಾಂಡ್ ಮೊತ್ತ ಫಲಾನುಭವಿಗಳಿಗೆ ಸೇರುತ್ತದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ: ಡಿಕೆಶಿಗೆ ನೀರಾವರಿ ಇಲಾಖೆ ನಿರ್ವಹಣೆಗಿಂತ ಕಾಂಗ್ರೆಸ್ ಹೈಕಮಾಂಡ್ ಏಜೆಂಟ್ ಕೆಲಸವೇ ಹೆಚ್ಚಾಗಿದೆ: ಆರ್.ಅಶೋಕ್ - TB Dam Gate Cut