ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 89.62 ಕೋಟಿ ರೂಪಾಯಿ ಅವ್ಯವಹಾರ ಸಂಬಂಧ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ, ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ಎಸ್ಐಟಿ ತಂಡ, ನಿಗಮದಲ್ಲಿ ಕಾರ್ಯನಿರ್ವಹಿಸಿ ಅಮಾನತುಗೊಂಡ ಇಬ್ಬರು ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ಚುರುಕುಗೊಳಿಸಿದೆ. ಒಂದೆಡೆ ಬಹುಕೋಟಿ ಅವ್ಯವಹಾರ ಇದಾಗಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಇನ್ನೊಂದೆಡೆ ತನಿಖೆ ನಡೆಸಲು ಎಸ್ಐಟಿ ಸಮರ್ಥವೆನಿಸಿದ್ದು ಸದ್ಯದ ಮಟ್ಟಿಗೆ ಸಿಬಿಐಗೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.
ಬ್ಯಾಂಕ್ಗಳಲ್ಲಿ 3 ಕೋಟಿ ಆಥವಾ ಅದಕ್ಕಿಂತ ಹೆಚ್ಚು ಅವ್ಯವಹಾರ ಅಥವಾ ದುರ್ಬಳಕೆ ಆಗಿರುವುದು ಕಂಡು ಬಂದರೆ ಆರ್ಬಿಐ ಮಾನದಂಡದ ಪ್ರಕಾರ ಸಿಬಿಐ ತನಿಖೆಗೆ ವರ್ಗಾಯಿಸಬೇಕಾದ ಆದೇಶವಿದೆ. ಅಲ್ಲದೆ 50 ಕೋಟಿಗಿಂತ ಹೆಚ್ಚು ವಂಚನೆಯಾದರೆ ಬ್ಯಾಂಕ್ನ ವಿಚಕ್ಷಣಾ ಅಧಿಕಾರಿಯೇ ಸಿಬಿಐಗೆ ದೂರು ನೀಡಬಹುದಾಗಿದೆ. ಇದಕ್ಕೆ ಪೂರಕ ಎಂಬಂತೆ ಯೂನಿಯನ್ ಬ್ಯಾಂಕ್ನ ಆಡಳಿತ ಮಂಡಳಿ ಸಹ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು.
3 ಕೋಟಿಗಿಂತ ಹೆಚ್ಚು ವಂಚನೆ ಕಂಡು ಬಂದರೆ ಸಿಬಿಐ ತನಿಖೆಗೆ ವರ್ಗಾಯಿಸಬೇಕು ಎಂಬ ಆರ್ಬಿಐ ಆದೇಶವಿದೆ. ಹಣಕಾಸು ಸಂಸ್ಥೆಗಳಲ್ಲಿ ಬಹುಕೋಟಿ ಅವ್ಯವಹಾರ ನಡೆದಾಗ ಸಿಬಿಐ ಎಂಟ್ರಿಯಾಗಲಿದೆ. ಆದರೆ ವಾಲ್ಮೀಕಿ ಅಭಿವೃದ್ಧಿ ನಿಗಮ ಅವ್ಯವಹಾರ ತನಿಖೆಗೆ ಸರ್ಕಾರವೇ ಎಸ್ಐಟಿ ರಚಿಸಿರುವಾಗ ಆರ್ಬಿಐ ಆದೇಶ ಇಲ್ಲಿ ಅನ್ವಯವಾಗುವುದಿಲ್ಲ. ಎಸ್ಐಟಿ ರಚನೆ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಸಿಬಿಐ ತನಿಖೆ ನೀಡುವುದಿಲ್ಲ ಎಂದು ಸರ್ಕಾರವೇ ಹೇಳಿರುವಾಗ ಕೇಂದ್ರ ತನಿಖಾ ಸಂಸ್ಥೆ ತನಿಖೆ ನಡೆಸುವುದು ಸದ್ಯದ ಮಟ್ಟಿಗೆ ಅಸಾಧ್ಯ. ಅವ್ಯವಹಾರವನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್ಗೆ ಹೋಗಿ ವಕಾಲತ್ತು ಹೂಡಿ ಅಲ್ಲಿಂದ ಆದೇಶವಾದಾಗ ಮಾತ್ರ ಅಧಿಕೃತವಾಗಿ ಸಿಬಿಐ ತನಿಖೆ ನಡೆಸಬಹುದಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.