ಬೆಂಗಳೂರು: ನಗರದಲ್ಲಿ ನೀರಿನ ಅಭಾವ ಹೆಚ್ಚಾಗುತ್ತಲೇ ಸಾಗುತ್ತಿದೆ. ಮಳೆಯ ಕೊರತೆಯಿಂದ ಕಾವೇರಿ ನದಿಯಿಂದ ಪ್ರತಿ ವರ್ಷ ನಗರಕ್ಕೆ ಬರುತ್ತಿದ್ದ 1480 ಎಂ.ಎಲ್.ಡಿ ನೀರಿನ ಪ್ರಮಾಣದಲ್ಲಿ ಅರ್ಧದಷ್ಟು ಕಡಿಮೆ ಆಗಿದೆ. 14,700 ಬೋರ್ ವೆಲ್ ಗಳಲ್ಲಿ 6,990 ಬತ್ತಿ ಹೋಗಿದ್ದು, ಇನ್ನಷ್ಟು ಸಂಕಷ್ಟವನ್ನು ತಂದಿಟ್ಟಿದೆ.
ಕಾವೇರಿ 5ನೇ ಹಂತದ ಯೋಜನೆಯನ್ನು ನಗರದ ಸುತ್ತ ಮುತ್ತಲಿನ 110 ಹಳ್ಳಿಗಳಲ್ಲಿ ನೀರು ಕೊಡಲು ಜಾರಿಗೆ ತರಲಾಗುತ್ತಿದೆ. ಮಹದೇವಪುರ, ಕೆ.ಆರ್.ಪುರ, ದಾಸರಹಳ್ಳಿ, ಯಲಹಂಕದ ಹಲವು ಭಾಗಗಳಿಗೆ ಕಾವೇರಿ ನೀರು ಇನ್ನೂ ತಲುಪಿಲ್ಲ. ಕಾವೇರಿ 5ನೇ ಹಂತದ ಯೋಜನೆಗೆ 775 ಎಂ.ಎಲ್.ಡಿ ನೀರು ಬೇಕಾಗಿದೆ. ಸದ್ಯ ನಗರದ ಹೊರವಲಯದ ಬಹುತೇಕ ಜನರು ಬೋರ್ವೆಲ್ ಮತ್ತು ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಬಿ ಪ್ಯಾಕ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯ ಸಂಯೋಜಕ ರಾಘವೇಂದ್ರ, ಮಳೆಯ ಅಭಾವ, ಕಾವೇರಿ ನೀರಿನ ಕೊರತೆ, ಬೋರ್ವೆಲ್ಗಳು ಒಣಗಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯಾವುದೇ ಪ್ಲಾನ್ ಇಲ್ಲದ ನಗರೀಕರಣ, ಸರಿಯಾಗಿ ನೀರಿನ ನಿರ್ವಹಣೆ ಮಾಡದೇ ಇರುವುದು ನೀರಿನ ಕೊರತೆಗೆ ಕಾರಣವಾಗಿದೆ. 2022 ರಲ್ಲಿ ವಾಟರ್ ಪಾಲಿಸಿಯಲ್ಲಿ ನೀರಿನ ಮರುಬಳಕೆ ಬಗ್ಗೆ ಮಹತ್ವದ ವಿಚಾರಗಳನ್ನು ಮುನ್ನಲೆಗೆ ತರಲಾಗಿದ್ದರೂ ಅದರ ಸರಿಯಾದ ನಿರ್ವಹಣೆ ಆಗುತ್ತಿಲ್ಲ ಎಂದು ಅವರು ಹೇಳಿದರು.
ನಮ್ಮ ಬೆಂಗಳೂರಿನಲ್ಲಿ 210 ಕೆರೆಗಳು ಇದ್ದು, ಅದರಲ್ಲಿ 167 ಕೆರೆಗಳು ಜೀವಂತ ಕೆರೆಗಳಾಗಿವೆ. ಕುಡಿಯುವುದಕ್ಕೆ ಅಲ್ಲದಿದ್ದರೂ ಇತರ ಬಳಕೆಗೆ ಆ ನೀರನ್ನು ಬಳಸಬಹುದಾಗಿದೆ. ಈ ನಿಟ್ಟಿನಲ್ಲಿ ಜಲಮಂಡಳಿ ಮತ್ತು ಪಾಲಿಕೆ ಜಂಟಿಯಾಗಿ ಕ್ರಮ ಕೈಗೊಳ್ಳಲು ಮುಂದಾಗುವುದು ಈ ಸಮಯದ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರ 556 ಕೋಟಿಯನ್ನು ನೀರಿನ ಕ್ಷಾಮದ ಸಲುವಾಗಿ ಮೀಸಲಿಟ್ಟಿದೆ. ನಗರದ ಪ್ರತಿ ವಾರ್ಡ್ಗೆ ಎಂದು 10 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಬೋರ್ವೆಲ್ಗಳಲ್ಲಿ ನೀರು ಸಿಗದ ಕಾರಣ ಕೆರೆಗಳ ಸರಿಯಾದ ನಿರ್ವಹಣೆ ಮಾಡದೇ ಇರುವುದು ಮುಖ್ಯ ಕಾರಣವಾಗಿದೆ. ಜನರ ತಪ್ಪುಗಳು ಸಹ ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಹೇಳಿದರು.
ಕಾವೇರಿ ನೀರು ಕುಡಿಯಲು ಮಾತ್ರ ಈಗಿನ ಸಂದರ್ಭದಲ್ಲಿ ಬಳಸಬೇಕಿದೆ. 1450 ಎಂ.ಎಲ್.ಡಿ ನೀರು ಕೇವಲ ಗೃಹ ಬಳಕೆಗೆ ಬಳಕೆಯಾದರೆ ಸೂಕ್ತವಾಗಿದೆ. ನಿರ್ಮಾಣ ಕಾರ್ಯಗಳಿಗೆ ಮತ್ತು ಕಾರ್ಖಾನೆಗಳಿಗೆ ಪುನರ್ ಬಳಕೆ ಮಾಡಿದ ನೀರನ್ನು ಬಳಸುವುದು ಸೂಕ್ತವಾಗಿದೆ ಎಂದು ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದಿ: ರಾಜಧಾನಿಯಲ್ಲಿ ನೀರಿನ ಅಭಾವ: ತೀವ್ರ ಸಂಕಷ್ಟಕ್ಕೆ ಸಿಲುಕಿದ ಪೀಣ್ಯ ಕೈಗಾರಿಕೆಗಳು