ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ಪ್ರಕರಣದ ತನಿಖೆಗೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ. ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಡಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 2 ಪ್ರಕರಣಗಳಲ್ಲಿ ದರ್ಶನ್ ಅವರೇ ಪ್ರಮುಖ ಆರೋಪಿಯಾಗಿದ್ದಾರೆ. ಮೂರೂ ಪ್ರಕರಣಗಳ ತನಿಖೆಗಾಗಿ ಪ್ರತ್ಯೇಕ ತಂಡಗಳನ್ನು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ರಚಿಸಿದ್ದಾರೆ.
ಮೊದಲನೇ ಪ್ರಕರಣದ ತನಿಖೆಯನ್ನು ಬೇಗೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ನಡೆಸಲಿದ್ದಾರೆ. ದರ್ಶನ್ ಅವರು ಜೈಲಿನ ಲಾನ್ನಲ್ಲಿ ರೌಡಿಶೀಟರ್ಸ್ ಜೊತೆ ಕುಳಿತು ಕಾಫಿ ಕುಡಿಯುತ್ತ ಸಿಗರೇಟ್ ಸೇದುತ್ತಿರುವುದರ ಕುರಿತು ತನಿಖೆ ನಡೆಯಲಿದೆ. ಲಾನ್ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಕುರ್ಚಿಗಳ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಕೊಟ್ಟವರು ಯಾರು? ಸಿಗರೇಟ್, ಮದ್ಯ, ಮಾದಕವಸ್ತುಗಳು ಜೈಲಿನಲ್ಲಿ ನಿಷೇಧವಿದ್ದರೂ ಸಿಕ್ಕಿದ್ದು ಹೇಗೆ ಎಂದು ತನಿಖೆ ನಡೆಯಲಿದೆ.
ಎರಡನೇ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಹುಳಿಮಾವು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರಿಗೆ ವಹಿಸಲಾಗಿದೆ. ಮೊಬೈಲ್ ಫೋನ್ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಬಗ್ಗೆ ತನಿಖೆ ನಡೆಯಲಿದ್ದು, ಫೋಟೋ ತೆಗೆದಿದ್ದು ಯಾರು? ಆರೋಪಿಗಳು ವಿಡಿಯೋ ಕರೆ ಮಾಡಿದ್ದು ಯಾರಿಗೆ? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಸಹ ಮೊಬೈಲ್ ಸಿಕ್ಕಿದ್ದು ಹೇಗೆ.? ಒದಗಿಸಿದವರು ಯಾರು? ಜಾಮರ್ ವ್ಯವಸ್ಥೆ ಇದ್ದರೂ ಸಹ ಸಂಪರ್ಕ ಸಾಧ್ಯವಾಗಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡಯಲಿದೆ.
ಮೂರನೇ ಪ್ರಕರಣದ ತನಿಖೆಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಎಸಿಪಿ ಮಂಜುನಾಥ್ ನೇತೃತ್ಚದ ತಂಡ ನಡೆಸಲಿದೆ. ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ತನಿಖೆ ನಡೆಯಲಿದೆ. ಆರೋಪಿಗಳಿಗೆ ಅನುಕೂಲಕರ ವಾತಾವರಣ ಕಲ್ಪಿಸಿದರು ಯಾರು? ಜೈಲಧಿಕಾರಿಗಳ ಗಮನಕ್ಕೆ ಬಾರದೆ ಇಷ್ಟೆಲ್ಲವೂ ಸಾಧ್ಯವಾಯಿತಾ ಎಂಬುದರ ಕುರಿತು ಸಮಗ್ರ ತನಿಖೆ ನಡೆಯಲಿದೆ.
ಇದನ್ನೂ ಓದಿ: ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಮಾಡುವ ಯೋಚನೆ ಇದೆ: ಸಿಎಂ ಸಿದ್ದರಾಮಯ್ಯ - Darshan Photo Viral