ಬೆಳಗಾವಿ: ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ ಸರ್ಕಾರಕ್ಕೆ ಅಗತ್ಯವಾಗಿ ಬರಬೇಕಾದ ಕೋಟ್ಯಂತರ ರೂ. ವರಮಾನ ವಂಚಿಸಲಾಗುತ್ತಿದ್ದು, ಇದನ್ನು ತಪ್ಪಿಸಲು ದಾಖಲೆಗಳೊಂದಿಗೆ ಪರಿಶೀಲನೆ ನಡೆಸುವ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಅಗತ್ಯತೆ ಇದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ ತಿಳಿಸಿದೆ.
ವಿಧಾನಸಭೆಯಲ್ಲಿ ಮಾರ್ಚ್ 2022ಕ್ಕೆ ಕೊನೆಗೊಂಡ ವರ್ಷಕ್ಕೆ ವರದಿಯನ್ನು ಮಂಡಿಸಲಾಯಿತು. ಅದರಲ್ಲಿ 12 ಉಪ ನೋಂದಣಿ ಅಧಿಕಾರಿಗಳ ಕಚೇರಿಗಳಲ್ಲಿ 56 ಜಂಟಿ ಅಭಿವೃದ್ಧಿ ಒಡಂಬಡಿಕೆಗಳಲ್ಲಿ ದರಗಳನ್ನು ತಪ್ಪಾಗಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ 10.26 ಕೊಟಿ ರೂ. ಮೊತ್ತದಷ್ಟು ಶುಲ್ಕ ಕಡಿಮೆ ಪ್ರಮಾಣದಲ್ಲಿ ವಿಧಿಸುವುದು ಗೊತ್ತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
50 ವರ್ಷಗಳ ಅವಧಿಗೆ ನೀಡಲಾದ ಗಣಿಗಾರಿಕೆ ಗುತ್ತಿಗೆಗಳನ್ನು 20 ಮತ್ತು 30 ವರ್ಷಗಳ ಅವಧಿಗೆ ಗುತ್ತಿಗೆಯಾಗಿ ಪರಿಗಣಿಸಲಾಗಿದೆ. ಇದರಿಂದ 13.33 ಕೋಟಿ ರೂ.ಗಳಷ್ಟು ಕಡಿಮೆ ಮೊತ್ತ ವಿಧಿಸಲಾಗಿದೆ. ಬೇಗೂರು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ಶೇ.5ರ ದರದ ಬದಲು ಕಡಿಮೆ ದರದಲ್ಲಿ ನೋಂದಣಿ ಮಾಡಿದ ಪರಿಣಾಮ 5.38 ಕೋಟಿ ರೂ. ನಷ್ಟವಾಗಿದೆ ಎಂದು ತಿಳಿಸಲಾಗಿದೆ.
3.36 ಕೊಟಿ ರೂ. ಅನಗತ್ಯ ವೆಚ್ಚ: ಭೂಮಿಯ ಲಭ್ಯತೆ ಖಚಿತಪಡಿಸಿಕೊಳ್ಳದೇ, ಅನುಷ್ಠಾನ ಏಜೆನ್ಸಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳನ್ನು ವಿಳಂಬವಾಗಿ ಪ್ರಾರಂಭಿಸುವುದರಿಂದ ಬಡ್ಡಿ ಆದಾಯದ ಮೂಲಕ ಏಜೆನ್ಸಿಗಳಿಗೆ 2.56 ಕೋಟಿ ರೂ. ಅನಗತ್ಯ ಲಾಭವಾಗಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಅಂತರ್ಜಾಲ ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿದ್ದು, ಅನಗತ್ಯವಾಗಿ 3.36 ಕೊಟಿ ರೂ. ವೆಚ್ಚವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ಷೇತ್ರ ನೀರಾವರಿ ಕಾಲುವೆಗಳನ್ನು ರಚಿಸಲು ಸಾಧ್ಯವಾಗದ ಕಾರಣ ನೀರಾವರಿಗೆ ಉದ್ದೇಶಿಸಲಾದ 2002ರ ರಾಜ್ಯ ಜಲ ನೀತಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ರಾಜ್ಯದಿಂದ ಸಮಗ್ರ ಯೋಜನೆಗಳನ್ನು ತಯಾರಿಸಿಲ್ಲ. ಟೆಂಡರ್‌ಗಳನ್ನು ಸಹ ಆಹ್ವಾನಿಸಿಲ್ಲ. ಭೂ ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಳಂಬ ಧೋರಣೆಯಿಂದ ಲಭ್ಯ ಇರುವ ಹಣವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು, ಔಷಧ ಕೊರತೆ: ಸಿಎಜಿ ವರದಿ