ಬೆಂಗಳೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ಯಾವ ಅಂಕಿಅಂಶವನ್ನು ಪರಿಗಣಿಸಬೇಕು ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಲು ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, "ಒಳಮೀಸಲಾತಿ ಕಲ್ಪಿಸುವ ಬಗ್ಗೆ ಚರ್ಚೆ ನಡೆದಿದೆ. ಸುಪ್ರೀಂ ಕೋರ್ಟ್ ಎಸ್ಸಿಗೆ ಒಳಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಒಳಮೀಸಲಾತಿ ಕಲ್ಪಿಸಲು ತೀರ್ಮಾನಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ನೇಮಿಸಿ, ಯಾವ ದತ್ತಾಂಶ ಪಡೆಯಬೇಕು ಎಂದು ಪರಿಶೀಲಿಸಿ ಮೂರು ತಿಂಗಳಲ್ಲಿ ವರದಿ ನೀಡಲು ಸೂಚಿಸಲಾಗಿದೆ" ಎಂದರು.
ಮುಂದಿನ ನೇಮಕಾತಿಗಳಿಗೆ ತಡೆ: "ಆಯೋಗದ ವರದಿ ಬರುವ ತನಕ ಮುಂದಿನ ಎಲ್ಲ ನೇಮಕಾತಿಯನ್ನು ಮುಂದೂಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ನೇಮಕಾತಿ ಅಧಿಸೂಚನೆಯನ್ನು ತಡೆಹಿಡಿಯಲು ತೀರ್ಮಾನಿಸಲಾಗಿದೆ. ಆಯೋಗ ವರದಿ ಸಲ್ಲಿಸುವ ತನಕ ನೇಮಕಾತಿಯನ್ನು ತಡೆಹಿಡಿಯಲು ತೀರ್ಮಾನಿಸಲಾಗಿದೆ" ಎಂದು ತಿಳಿಸಿದರು.
ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, "ಸದಾಶಿವ ಆಯೋಗ ವರದಿಯನ್ನು ಬಿಜೆಪಿ ಸರ್ಕಾರ ಕ್ಲೋಸ್ ಮಾಡಿದೆ. ಬಿಜೆಪಿ ಸರ್ಕಾರ ಸಂಪುಟ ಉಪಸಮಿತಿ ವರದಿ ಆಧಾರಿಸಿ ಒಳಮೀಸಲಾತಿ ಕಲ್ಪಿಸಿ ಆದೇಶ ಹೊರಡಿಸಿದ್ದರು. ದಲಿತ ಪಂಗಡಗಳ ಎಲ್ಲಾ ವರ್ಗೀಕರಣ ಸಮೂಹದವರು ಒಳಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದಾರೆ. ಎಲ್ಲರೂ ಒಳಮೀಸಲಾತಿ ಕಲ್ಪಿಸಲು ಒಪ್ಪಿದ್ದಾರೆ. ಇದೇ ಮಾದರಿ ತೆಲಂಗಾಣ ಸರ್ಕಾರ ಒಳ ಮೀಸಲಾತಿಯನ್ನು ತೀರ್ಮಾನಿಸಿದೆ. ರಾಜ್ಯ ಸರ್ಕಾರ ಒಳಮೀಸಲಾತಿಗೆ ಬದ್ಧವಾಗಿದೆ" ಎಂದು ಹೇಳಿದರು.
ಒಗ್ಗಟ್ಟಾಗಿ ತೀರ್ಮಾನ ಮಾಡಿದ್ದೇವೆ: ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, "30 ವರ್ಷದ ಹೋರಾಟಕ್ಕೆ ಫಲ ಸಿಕ್ಕಿದೆ. ಸರ್ಕಾರ ಒಳಮೀಸಲಾತಿ ಕಲ್ಪಿಸಲು ಒಪ್ಪಿದೆ. ಆಯೋಗಕ್ಕೆ ಮೂರು ತಿಂಗಳು ಕಾಲಾವಕಾಶ ಕೊಡಲಾಗಿದೆ. ನಾವೆಲ್ಲರೂ ಒಟ್ಟಿಗೆ ಸೇರಿ ಆಯೋಗಕ್ಕೆ ನೆರವು ನೀಡುತ್ತೇವೆ. ನಾವೆಲ್ಲರೂ ಒಗ್ಗಟ್ಟಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ. ಇದು ಸುಲಭದ ಕೆಲಸ ಅಲ್ಲ. ಮೂರು ತಿಂಗಳಲ್ಲಿ ವರದಿ ತರಿಸಿ ಇದನ್ನು ಜಾರಿ ಮಾಡುತ್ತೇವೆ" ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಸುಪ್ರೀಂ ಕೋರ್ಟ್ ನಂಬಲರ್ಹ ದತ್ತಾಂಶ ಬೇಕು ಎಂದು ಹೇಳಿದೆ. ನಮ್ಮಲ್ಲಿ ಜಾತಿ ಗಣತಿ ಸಮೀಕ್ಷೆ ಇದೆ. ವರದಿಲ್ಲಿನ ಅಂಶಗಳ ಬಗ್ಗೆ ಮಾಹಿತಿ ಇಲ್ಲ. ಆ ಸಮೀಕ್ಷೆಯ ಅಂಕಿಅಂಶ ಕಾನೂನು ಮುಂದೆ ನಿಲ್ಲುತ್ತಾ ಎಂಬ ಅನುಮಾನಗಳು ಇವೆ. ಹೀಗಾಗಿ ಆಯೋಗ ದತ್ತಾಂಶವನ್ನು ಎಲ್ಲಿಂದ ಪಡೆಯಬಹುದು?. ಅದು ಕಾನೂನಿನಡಿ ಮಾನ್ಯವಾಗುತ್ತಾ ಎಲ್ಲವನ್ನೂ ಪರಿಶೀಲಿಸಲಿದೆ. ಕಾನೂನು ಪ್ರಕಾರ ಒಪ್ಪಿತವಾಗುವುದು ರಾಷ್ಟ್ರೀಯ ಜನಗಣತಿ ಮಾತ್ರ. ಮಿಕ್ಕಿದಂತೆ ಯಾವುದೇ ಸಮೀಕ್ಷೆಗಳು ಮಾನ್ಯವಾಗಲ್ಲ" ಎಂದು ತಿಳಿಸಿದರು.
ದತ್ತಾಂಶದ ಬಗ್ಗೆ ಗೊಂದಲ: ಸುಪ್ರೀಂ ಕೋರ್ಟ್ ಒಳಮೀಸಲಾತಿಗಾಗಿ ನಂಬಲರ್ಹವಾದ ದತ್ತಾಂಶವನ್ನು ಪರಿಗಣಿಸಬೇಕು ಎಂದು ಹೇಳಿದೆ. ಆದರೆ, ಆಯೋಗ ಯಾವ ರೀತಿ ದತ್ತಾಂಶ ಪರಿಗಣಿಸಯತ್ತದೆ, ಯಾವ ದತ್ತಾಂಶವನ್ನು ಪರಿಶೀಲಿಸುತ್ತದೆ ಎಂಬ ಪ್ರಶ್ನೆಗೆ, ಸಚಿವರುಗಳಲ್ಲೇ ಗೊಂದಲ ವ್ಯಕ್ತವಾಯಿತು.
ಇದನ್ನೂ ಓದಿ: ಗೆಜೆಟ್ ದೋಷದಿಂದಾಗಿ ಹೊನವಾಡ ಗ್ರಾಮದ ರೈತರ ಜಮೀನು ವಿಷಯದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್