ಬೆಂಗಳೂರು : ನಾನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಲ್ಲ, ಕ್ಯಾಪ್ಟನ್ ಆದರೂ ಸೆಂಚುರಿ ಬಾರಿಸಬಹುದು. ಪ್ಲೇಯರ್ ಆದರೂ ಸೆಂಚುರಿ ಬಾರಿಸಲು ಅವಕಾಶವಿದೆ. ಒಂದು ಟೀಂ ಆಗಿ ಕೆಲಸ ಮಾಡುತ್ತೇವೆ ಎಂದು ವಿಧಾನ ಪರಿಷತ್ಗೆ ಆಯ್ಕೆಯಾಗಿರುವ ನೂತನ ಸದಸ್ಯ ಸಿ ಟಿ ರವಿ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ವಿಧಾನಪರಿಷತ್ ಸದಸ್ಯರಾಗಿ 17 ಜನರಿಗೆ ಸಭಾಪತಿಗಳು ಪ್ರಮಾಣವಚನ ಭೋದನೆ ಮಾಡಲಿದ್ದಾರೆ. ಬ್ಯಾಂಕ್ವೆಟ್ ಹಾಲ್ ನಲ್ಲಿ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಪರಿಷತ್ ವಿಪಕ್ಷ ನಾಯಕನ ಆಯ್ಕೆ ವಿಚಾರ ಚರ್ಚೆಯಲ್ಲಿರುವುದು ನಿಜ. ಆದರೆ, ನಾನು ಆ ಸ್ಥಾನದ ಆಕಾಂಕ್ಷಿ ಏನೂ ಅಲ್ಲ. ಪಕ್ಷ ನನ್ನನ್ನು ಮೇಲ್ಮನೆಗೆ ಕಳಿಸಿದೆ. ಪಕ್ಷ ಜವಾಬ್ದಾರಿ ನೀಡಿದೆ ಎಂದರು.
ವಿಧಾನಪರಿಷತ್ ಸದಸ್ಯನಾಗಿ ರಾಜ್ಯದ ಜನರ ಹಿತದೃಷ್ಟಿಯಿಂದ ಸದನದಲ್ಲಿ ಎಲ್ಲಾ ವಿಚಾರ ಚರ್ಚೆ ಮಾಡುವ ಅವಕಾಶ ಇದೆ. ವಿಪಕ್ಷ ನಾಯಕನಾಗಿ ಆಯ್ಕೆ ಪಕ್ಷಕ್ಕೆ ಬಿಟ್ಟಿದ್ದು. ನಾಯಕನಾಗಿಯಾದರೂ ಪ್ಲೇಯರ್ ಆಗಿಯಾದರೂ ಸೆಂಚುರಿ ಹೊಡೆಯೋಕೆ ಅವಕಾಶ ಇದೆ. ಮೆರಿಟ್ ಅಂದರೆ ಮೆರಿಟ್, ಪ್ರಾಬ್ಲಮ್ ಅಂದ್ರೆ ಪ್ರಾಬ್ಲಮ್. ಒಂದು ತಂಡವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಜಾತಿಗೊಂದು ಡಿಸಿಎಂ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಕಾಂಗ್ರೆಸ್ ಒಳಗಿನ ವಿಚಾರ, ಅವರಿಗೆ ಬಿಟ್ಟಿದ್ದು. ಡಿಸಿಎಂ ಎಷ್ಟು ಮಾಡಬೇಕು ಅನ್ನೋದು ಅವರ ಪಕ್ಷಕ್ಕೆ ಬಿಟ್ಟಿದ್ದು. ಜಾತಿಗೊಂದು ಡಿಸಿಎಂ ಅಂತಿದ್ದಾರೆ. ನಾವು ಪ್ರಮಾಣವಚನ ಸ್ವೀಕಾರ ಮಾಡೋದೇ ಜಾತಿ, ರಾಗ, ದ್ವೇಷ ಇಲ್ಲದಿರಲಿ ಅಂತ. ಚರ್ಚೆಗೆ ಅದು ಕಾರಣ ಆಗಬಾರದು ಎಂದರು.
ಎರಡೂವರೆ ವರ್ಷಕ್ಕೆ ಅಧಿಕಾರ ಬದಲಾವಣೆ ಅಂತ ಮಾಡಿಕೊಂಡಿದ್ದರೆ ಸಂವಿಧಾನದಲ್ಲಿ ಅವಕಾಶ ಇದೆ. ಸಿದ್ದರಾಮಯ್ಯ ಇಳಿಸಬೇಕು ಅನ್ನೋದು ನಮ್ಮ ರಾಜಕಾರಣ ಅಲ್ಲ. ನಾವು ಡಿ. ಕೆ ಶಿವಕುಮಾರ್ ಅವರನ್ನ ಟಾರ್ಗೆಟ್ ಕೂಡ ಮಾಡಿಲ್ಲ. ರಾಜಕಾರಣ ನಿಂತ ನೀರಲ್ಲ ಅನ್ನೋದು ತಿಳಿದಿದೆ. ಬಹುಮತ ಏನಾದರೂ ಇರಬಹುದು. ಶಾಸಕರಿಗೆ ಪಕ್ಷದಲ್ಲಿ ಇರಲು ಇಚ್ಛೆ ಇಲ್ಲ ಅಂದರೆ ಯಾರು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಸರ್ಕಾರ ರಚಿಸುವ ಸಂಖ್ಯೆ ನಮ್ಮಲ್ಲಿಲ್ಲ: ಕೇಂದ್ರ ಸಚಿವ ವಿ ಸೋಮಣ್ಣ ಅವರು ಸರ್ಕಾರ ಬೀಳಿಸುವ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಬಿಜೆಪಿಯಿಂದ ಯಾವುದೇ ಆಪರೇಷನ್ ಮಾಡಲ್ಲ. ನಮ್ಮ ಬಳಿ ಸರ್ಕಾರ ಮಾಡುವಷ್ಟು ನಂಬರ್ ಕೂಡ ಇಲ್ಲ. ಸರ್ಕಾರ ಬಂದು 14 ತಿಂಗಳ ಅಧಿಕಾರ ನೋಡಿದ್ದೀರಿ. ಬಿಹಾರದಂತ ರಾಜ್ಯದಲ್ಲಿ ಕ್ರೈಮ್ ರೇಟ್ ಕಡಿಮೆ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಕ್ರೈಮ್ ರೇಟ್ ಜಾಸ್ತಿ ಆಗುತ್ತಿದೆ. ಅಧಿಕಾರದಲ್ಲಿ ಇರೋರು ನಾನೆಷ್ಟು ಲೂಟಿ ಮಾಡಲಿ ಅಂತ ಪೈಪೋಟಿಗೆ ಬಿದ್ದಿದ್ದಾರೆ ಎಂದರು.
ಸಿದ್ದರಾಮಯ್ಯ ಅವರಲ್ಲಿ ಮೊದಲ ಗತ್ತು ಕಾಣುತ್ತಿಲ್ಲ. ನಮ್ಮದೆಲ್ಲ ಮುಗೀತು, ಯಾರನ್ನ ಸೆಟಲ್ ಮಾಡಬೇಕು ಅನ್ನೋ ಹಂತಕ್ಕೆ ಬಂದಿದ್ದಾರೆ. ಈ ಒಂದು ಕೆಲಸ ಮಾಡಿದರೆ ಜಾಬ್ ಕ್ರಿಯೇಟ್ ಆಗುತ್ತದೆ. ರೈತರಿಗೆ ಅನುಕೂಲ ಆಗಲಿದೆ ಅನ್ನೋ ಒಂದೇ ಒಂದು ನಿರ್ಣಯ ತೋರಿಸಿ. ನಾವ್ಯಾರು ಈ ಸರ್ಕಾರಕ್ಕೆ ಒಳ್ಳೆ ಸರ್ಟಿಫಿಕೆಟ್ ಕೊಡಲ್ಲ. ಜನರೂ ಕೂಡ ಕೊಡಲ್ಲ. ಅವರು ಒಳ್ಳೆಯ ಆಡಳಿತ ಕೊಟ್ಟಿದ್ದರೆ ನಾವು ಒಂದೂ ಸೀಟು ಗೆಲ್ಲುತ್ತಿರಲಿಲ್ಲ. ಅವರ ಕೆಟ್ಟ ಆಡಳಿತದ ಪರಿಣಾಮ ಎನ್ಡಿಎಗೆ 19 ಸೀಟು ಬಂದಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ವಿಚಾರ ಸಂಬಂಧ ಪಾಪ ಪುಣ್ಯ ನನಗೆ ಗೊತ್ತಿಲ್ಲ. ಅಂತರಾತ್ಮ, ಪರಮಾತ್ಮ ಅನ್ನೋದು ಇರುತ್ತದೆ. ನೆಲದ ಕಾನೂನು ಎಲ್ಲರಿಗೂ ಒಂದೇ. ಪಾಪ, ಪುಣ್ಯ ಅಂತ ಇದ್ದರೆ ಅದು ಅನ್ವಯ ಆಗಲಿದೆ ಎಂದು ತಿಳಿಸಿದರು.
ಹೆಚ್ಡಿಕೆ ಪರ ಬ್ಯಾಟ್ ಬೀಸಿದ ಸಿ ಟಿ ರವಿ : ಗಣಿ ಅನುಮತಿ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ನಿಂತ ರಾಜ್ಯ ಸರ್ಕಾರ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ನನಗೆ ಅರ್ಥ ಆಗುತ್ತಿಲ್ಲ. ಅವರು ಸಹಿ ಹಾಕಿರೋದು ಸರ್ಕಾರಿ ಸಂಸ್ಥೆಯದ್ದು, ಅದರಲ್ಲಿ ಕಿಕ್ ಬ್ಯಾಕ್ ಕೊಡಲ್ಲ. ಕಾಂಗ್ರೆಸ್ ಕಿಕ್ ಬ್ಯಾಕ್ ಪಡೆಯೋಕೆ ಯೋಚನೆ ಮಾಡುತ್ತಿರಬಹುದು. ಕಾಂಗ್ರೆಸ್‌ನವರ ಬಾಲಿಶ ಹೇಳಿಕೆ ಗಮನಿಸಿದೆ. ಖಾಸಗಿ ಸಂಸ್ಥೆ ನಿಯಮ ತಂದರು.
ಜಿಂದಾಲ್ ಕನ್ನಡಿಗರಿಗೇ ಉದ್ಯೋಗ ಕೊಡೋದು ಅಂದರು. ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದಾರೆ? ಸೂಟ್ಕೇಸ್ ಕೊಡಲಿ ಅಂತ ಬಯಸಿದರೆ, ಅಲ್ಲಿ ಉದ್ಯೋಗ ಸಿಗಲ್ಲ. ಸರ್ಕಾರಿ ಸಂಸ್ಥೆ ಯಾವುದೂ ಕಿಕ್ ಬ್ಯಾಕ್ ಕೊಡಲ್ಲ ಅನ್ನೋದು ಅವರಿಗೆ ತಿಳಿದಿಲ್ಲ ಎಂದು ಕೈ ನಾಯಕರ ಆರೋಪಗಳಿಗೆ ತಿರುಗೇಟು ನೀಡಿ ಹೆಚ್ಡಿಕೆ ಪರ ಬ್ಯಾಟಿಂಗ್ ಮಾಡಿದರು.
ಇದನ್ನೂ ಓದಿ : ಸಚಿವ ನಾಗೇಂದ್ರ ರಾಜೀನಾಮೆ ಪಡೆದು, ಪ್ರಕರಣ ಸಿಬಿಐಗೆ ವಹಿಸಿ: ಸಿಟಿ ರವಿ ಒತ್ತಾಯ - Former Minister C T Ravi
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಏರ್ಪಡಿಸಿದ್ದ ಜಗನ್ನಾಥ ರಾವ್ ಜೋಶಿಯವರ ಜನ್ಮ ದಿನ ಮತ್ತು ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರ ಹಿತದ ಹಿನ್ನೆಲೆಯಲ್ಲೇ ಬಿಜೆಪಿ ರಾಜಕಾರಣ ಮಾಡುತ್ತ ಬಂದಿದೆ ಎಂದರು. ಕರ್ನಾಟಕದಿಂದ ಹೊರಗೆ, ಮಧ್ಯಪ್ರದೇಶದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಜಗನ್ನಾಥ ರಾವ್ ಜೋಶಿ ಅವರು ಕಾರ್ಯಕರ್ತರಿಗೆ ಪ್ರೇರಕರು. ಅವರ ಹೆಸರನ್ನೇ ಈ ಭವನಕ್ಕೂ ಇಟ್ಟಿದ್ದೇವೆ. ಸಂಘಟಕ, ಮಾರ್ಗದರ್ಶಕರಾಗಿ ಪಕ್ಷದ ರಾಜ್ಯ ಮತ್ತು ದೇಶದ ಸಂಘಟನೆಯ ನಾಯಕತ್ವ ವಹಿಸಿ ಅವರು ಕರ್ನಾಟಕ ಕೇಸರಿ ಎಂಬ ಹೆಸರಿಗೆ ತಕ್ಕಂತೆ ಬದುಕಿದವರು. ನರಗುಂದದಲ್ಲಿ ಅವರು ಹುಟ್ಟಿದ ಮನೆಯನ್ನು ಸ್ಮಾರಕವಾಗಿ ಪರಿವರ್ತನೆ ಮಾಡಲಾಗಿದೆ. ಅಲ್ಲಿ ಅವರ ಬದುಕಿನ ಸಂಗತಿಗಳ ಚಿತ್ರಣ ಲಭಿಸುತ್ತದೆ. ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೂ ಅವರ ಜೀವನಾನುಭವ ಸಿಗಲಿ ಎಂದು ಸ್ಮಾರಕ ಮಾಡಲಾಗಿದೆ ಎಂದು ಹೇಳಿದರು.
ಶ್ಯಾಮಪ್ರಸಾದ ಮುಖರ್ಜಿಯವರು ತಕ್ಕಮಟ್ಟಿನ ಶ್ರೀಮಂತ ಮನೆತನದಲ್ಲಿ ಜನಿಸಿದ್ದರು. ಕಿರಿಯ ವಯಸ್ಸಿಗೇ ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿಯಾಗಿ ಅವರು ಕೆಲಸ ಮಾಡಿದ್ದರು. ಹಿಂದೂ ಮಹಾಸಭೆಯ ಕಾರ್ಯಕಾರಿ ಅಧ್ಯಕ್ಷ, ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸರಕಾರದಲ್ಲಿ ಸಚಿವರಾಗಿದ್ದರು. ಇವರು ಕೇವಲ ಸುಶಿಕ್ಷಿತ, ವಾಗ್ಮಿಯಲ್ಲ; ರಾಜನೀತಿ ಕ್ಷೇತ್ರದ ಕುಶಲ ಸಂಘಟಕರೂ ಆಗಿದ್ದು, ಅಪ್ರತಿಮ ರಾಷ್ಟ್ರವಾದಿಯಾಗಿ ಕಾರ್ಯನಿರ್ವಹಿಸಿದವರು. ರಾಷ್ಟ್ರಹಿತದ ಜೊತೆ ಯಾವತ್ತೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರದು ಎಂದು ನುಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸುನೀಲ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಶಾಸಕ ಬಸವರಾಜ್ ಮತ್ತಿಮೂಡ್, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ವಿಭಾಗ ಸಂಘಟನಾ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ, ವಿಭಾಗ ಪ್ರಭಾರಿ ರಾಜೇಶ್ ಕಾವೇರಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಪ್ರಮುಖರು ಕಾರ್ಯಕರ್ತರು ಮತ್ತು ಕಾರ್ಯಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.