ಹಾವೇರಿ: ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತೀ ವರ್ಷ 2,500 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುತ್ತದೆ. ಶತಮಾನದ ಇತಿಹಾಸವಿರುವ ಈ ಮಾರುಕಟ್ಟೆ ಆರಂಭದಿಂದಲೂ ನಂಬಿಕೆ ಹುಸಿಗೊಳಿಸಿಲ್ಲ. ಇಲ್ಲಿಯ ಪಾರದರ್ಶಕ ಬಿಲ್ಲಿಂಗ್ ಮತ್ತು ಇ-ಟೆಂಡರ್ ವ್ಯವಸ್ಥೆಗೆ ಕರ್ನಾಟಕ ಸೇರಿದಂತೆ ದೇಶದ ವಿವಿಧಡೆಯ ರೈತರು ಮಾರು ಹೋಗಿದ್ದಾರೆ.
ಈ ಮಾರುಕ್ಕಟ್ಟೆಯ ಹಿಂದೆ ಸಾಕಷ್ಟು ವರ್ತಕರು, ಖರೀದಿದಾರರು, ಶ್ರಮಿಕರ ಪರಿಶ್ರಮವಿದೆ. ಆದರೆ ಇದೀಗ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಒಡೆಯುವ ಹುನ್ನಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸರ್ಕಾರ ಬಜೆಟ್‌ನಲ್ಲಿ ರಾಣೇಬೆನ್ನೂರು ಮೆಗಾ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ತೆರೆಯಲು ಅನುದಾನ ನೀಡಿದೆ. ಆದರೆ ರಾಣೇಬೆನ್ನೂರು ಮೆಗಾ ಮಾರುಕಟ್ಟೆಗೆ ತಾವು ಹೋಗುವುದಿಲ್ಲ ಎಂದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ವರ್ತಕರು ಹೇಳುತ್ತಿದ್ದಾರೆ. ಈ ಮಾರುಕಟ್ಟೆ ಬ್ಯಾಡಗಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸುಮಾರು 25 ಸಾವಿರಕ್ಕೂ ಅಧಿಕ ಜನರ ಬದುಕಿನ ಬುತ್ತಿ ಎಂಬುದು ಅವರ ಮಾತು.
ಕಾರ್ಮಿಕರಾಗಿ, ವರ್ತಕರಾಗಿ ತುಂಬು ತೆಗೆಯುವ ಮಹಿಳೆಯರಿಂದ ಹಿಡಿದು 25 ಸಾವಿರಕ್ಕೂ ಅಧಿಕ ಜನ ಈ ಮಾರುಕಟ್ಟೆಯನ್ನು ಅವಲಂಭಿಸಿದ್ದಾರೆ. ಖಾರದಪುಡಿ ತಯಾರಿಸುವ ಅನೇಕ ಘಟಕಗಳು ಇಲ್ಲಿವೆ. ಬ್ಯಾಡಗಿ ಸುತ್ತಮುತ್ತ 25ಕ್ಕೂ ಅಧಿಕ ಕೋಲ್ಡ್ ಸ್ಟೋರೇಜ್‌ಗಳ ಸ್ಥಾಪನೆಯಾಗಿದೆ. ಇಲ್ಲಿಯ ಮೆಣಸಿನಕಾಯಿ ಅವಲಂಬಿಸಿ ಮೂರು ಬೃಹತ್ ಕಾರ್ಖಾನೆಗಳು ಆರಂಭವಾಗಿವೆ. ಇದನ್ನೆಲ್ಲ ಬಿಟ್ಟು ನಾವು ರಾಣೇಬೆನ್ನೂರು ಮೆಣಸಿನಕಾಯಿ ಮಾರುಕಟ್ಟೆಗೆ ಹೋಗುವುದಿಲ್ಲ ಎಂದು ಬ್ಯಾಡಗಿ ವರ್ತಕರು ಹೇಳುತ್ತಿದ್ದಾರೆ.
ಒಂದೇ ಕುಟುಂಬದ ಸದಸ್ಯರಂತಿರುವ ನಮ್ಮನ್ನು ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ವರ್ತಕರ ಸಂಘದ ಗೌರವ ಕಾರ್ಯದರ್ಶಿ ರಾಜು ಮೋರಗೇರಿ ದೂರಿದರು. "ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಕೇವಲ ಒಣ ಮೆಣಸಿನಕಾಯಿ ಮಾರಾಟಕ್ಕೆ ಸೀಮಿತವಾದ ಮಾರುಕಟ್ಟೆ. ಇಲ್ಲಿಯ ವರ್ತಕರಾದ ನಮಗೆ ಒಣ ಮೆಣಸಿನಕಾಯಿ ಮಾರಾಟ ಬಿಟ್ಟರೆ ಬೇರೆ ಯಾವುದೇ ಕೆಲಸ ಬರುವುದಿಲ್ಲ. ಉಳಿದ ತರಕಾರಿಯಾಗಲಿ, ಕಾಳುಕಡಿ ಮಾರಾಟದ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ರಾಣೇಬೆನ್ನೂರು ಮತ್ತು ಹಾವೇರಿ ವರ್ತಕರಿಗೆ ಇದೆಲ್ಲದರ ಅನುಭವಿದೆ. ಈ ಕಾರಣದಿಂದ ಅವರಿಗೆ ರಾಣೇಬೆನ್ನೂರು ಮೆಗಾ ಮಾರುಕಟ್ಟೆ ಲಾಭಕರವಾಗಲಿದೆ. ಆದರೆ ನಮಗೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಬಿಟ್ಟರೆ ಬೇರೆ ದಾರಿಯಿಲ್ಲ" ಎಂದರು.
ಈ ಕುರಿತಂತೆ ಮಾತನಾಡಿದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಉದ್ಯಮಿ ಎಸ್.ಆರ್.ಪಾಟೀಲ್, "ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಇಷ್ಟು ವಿಶ್ವಾಸ ಪಡೆಯಲು ಇಲ್ಲಿನ ವ್ಯವಸ್ಥೆ ಕಾರಣ. ಇದಕ್ಕಾಗಿ ಇಲ್ಲಿಗೆ ದೇಶದ ವಿವಿಧೆಡೆಯಿಂದ ರೈತರು ಮೆಣಸಿನಕಾಯಿ ಮಾರಾಟಕ್ಕೆ ಬರುತ್ತಾರೆ. ಈ ಮಾರುಕಟ್ಟೆಯನ್ನು ಅವಲಂಭಿಸಿ ಹಲವು ಕಿರು ಉದ್ಯಮಗಳು, ಬೃಹತ್ ಉದ್ಯಮಗಳು ಸ್ಥಾಪಿತವಾಗಿವೆ. ಕೋಲ್ಡ್ ಸ್ಟೋರೇಜ್ ಸೇರಿದಂತೆ ಹಲವು ವ್ಯವಸ್ಥೆಗಳನ್ನು ವರ್ತಕರು ಮಾಡಿಕೊಂಡಿದ್ದಾರೆ".
"ಈಗ ಇದನ್ನೆಲ್ಲಾ ಬಿಟ್ಟು ನಾವು ರಾಣೇಬೆನ್ನೂರಿಗೆ ಹೋಗಿ ಅಲ್ಲಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ತಂದು ಬ್ಯಾಡಗಿಯಲ್ಲಿ ಸಂಸ್ಕರಿಸಿ ಖರೀದಿದಾರರಿಗೆ ಮಾರುವುದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಹೀಗಾಗಿ ನಮಗೆ ಯಾವುದೇ ಬೇರೆ ಮಾರುಕಟ್ಟೆ ಬೇಡ, ನಮ್ಮ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಒಂದಿದ್ದರೆ ಸಾಕು. ರಾಣೆೇಬೆನ್ನೂರು ಮಾರುಕಟ್ಟೆಗೆ ಬೇರೆ ವರ್ತಕರು ಬಂದು ವ್ಯಾಪಾರ ಆರಂಭಿಸಬಹುದು. ಅದು ಅವರಿಗೆ ಬಿಟ್ಟ ವಿಚಾರ" ಎಂದು ಎಸ್.ಆರ್.ಪಾಟೀಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ದಾಂಧಲೆ; ವರ್ತಕರ ಸಂಘದ ಅಧ್ಯಕ್ಷರು ಹೇಳಿದ್ದೇನು?