ದಾವಣಗೆರೆ: ಬಸನಗೌಡ ಪಾಟೀಲ ಯತ್ನಾಳ ಅವರಿಗೆ ದೀರ್ಘ ಕಾಲದ ಸ್ಟ್ರಾಟರ್ಜಿ ಇದ್ದಂತೆ ಕಾಣುತ್ತಿದೆ. ಎಲ್ಲವನ್ನೂ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಅನುಮಾನಗಳಿಗೆ, ಆಸೆಗಳಿಗೆ ಕಾಲವೇ ಉತ್ತರ ಕೊಡಲಿದೆ, ಅವರಿಗೆ (ಯತ್ನಾಳ) ಒಳ್ಳೆಯದಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದರು.
ಹೊನ್ನಾಳಿಯಲ್ಲಿಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ಯತ್ನಾಳ ಅವರು ಯಾವುದೇ ಹೋರಾಟ ಮಾಡಬಾರದು ಅಂತ ನಾನು ಹೇಳಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಯತ್ನಾಳ ಅವರ ಆಸೆ ಮತ್ತು ಪ್ರಶ್ನೆಗಳಿಗೆ ಕಾಲವೇ ಉತ್ತರ ಕೊಡಲಿದೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ಸ್ಥಾನ ನೀಡಿರೋದು ಸಿಎಂ ಆಗಲು ಅಲ್ಲ. ಪಕ್ಷ ಸಂಘಟಿಸಲು ಆ ಜವಾಬ್ದಾರಿ ನೀಡಿದ್ದಾರೆ. ಆ ಸ್ಥಾನವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ಮುಂದಿನ ಸಿಎಂ ಅಭ್ಯರ್ಥಿ ಎಂದು ಕಾರ್ಯಕರ್ತರ ಘೋಷಣೆ ಕುರಿತ ಪ್ರಶ್ನೆಗೆ ಯತ್ನಾಳ ಉತ್ತರಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ ಮತ್ತು ಭ್ರಷ್ಟಾಚಾರಗಳನ್ನು ಹೊರಗೆಳೆಯುವ ಕೆಲಸ ಮಾಡುತ್ತೇವೆ. ಉತ್ತರ ಕರ್ನಾಟಕ ಸೇರಿ ಯಾವುದೇ ಅಭಿವೃದ್ಧಿ ಮಾಡದ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಯಾವುದೇ ಅಭಿವೃದ್ಧಿ ಇಲ್ಲದೆ ರಾಜ್ಯದ ಜನತೆ ತತ್ತರಿಸುವಂತಾಗಿದೆ. ಸಂಕಷ್ಟದಲ್ಲಿರುವ ರೈತರಿಗೂ ನೆರವಿಗೆ ಬಂದಿಲ್ಲ. ಅವರ ಧ್ವನಿಯಾಗಿ ನಾಳೆಯಿಂದ ಅಧಿವೇಶನದಲ್ಲಿ ಎಚ್ಚರಿಸುವ ಕೆಲಸ ಮಾಡಲಿದ್ದೇವೆ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ಪರದಾಡುತ್ತಿದೆ. ಚುನಾವಣೆ ಮೂರು ದಿನ ಇದ್ದಾಗ ಗ್ಯಾರಂಟಿ ಹಣ ಬಿಡುಗಡೆ ಮಾಡ್ತಾರೆ. ಬಡವರಿಗೆ ಅವಮಾನ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡ್ತಿದೆ. ಗ್ಯಾರಂಟಿ ಯೋಜನೆಗಳನ್ನು ಯಾರೂ ಕೇಳಿರಲಿಲ್ಲ. ಈಗ ಅಭಿವೃದ್ಧಿಗೆ ಹಣ ಇಲ್ಲದೆ ಕಾಂಗ್ರೆಸ್ ಶಾಸಕರೇ ತಲೆ ಎತ್ತಿ ಹೋಗದ ಸ್ಥಿತಿ ಎದುರಾಗಿದೆ. ಯಾವ ಕಾಲದಲ್ಲೂ ಇಂತಹ ಕೆಟ್ಟ ಸ್ಥಿತಿ ಬಂದಿರಲಿಲ್ಲ ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.
ವಕ್ಫ್ ವಿರುದ್ಧ ನಮ್ಮ ಪ್ರವಾಸ ಇನ್ನೂ ಮುಗಿದಿಲ್ಲ. ಚಳಿಗಾಲದ ಅಧಿವೇಶದ ನಂತರ ಪ್ರವಾಸ ಮಾಡಿ ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ. ನಂತರ ಕೇಂದ್ರದ ಜಂಟಿ ಪಾರ್ಲಿಮೆಂಟರಿ ಸಮಿತಿಗೆ ಆ ವರದಿ ಸಲ್ಲಿಸುತ್ತೇವೆ ಎಂದರು.
ಬಳ್ಳಾರಿ ಗರ್ಭಿಣಿಯರ ಸಾವು ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ 300ಕ್ಕೂ ಹೆಚ್ಚು ಗರ್ಭಿಣಿಯರು, ಬಾಣಂತಿಯರ ಸಾವಾಗಿರುವ ಬಗ್ಗೆ ವರದಿಯಾಗಿದೆ. ನಿನ್ನೆ ನಮ್ಮ ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ಕುರಿತು ಅಧಿವೇಶನದಲ್ಲಿ ಪ್ರಶ್ನಿಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಬಹಿರಂಗ ಹೇಳಿಕೆ ವಿಚಾರ: ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ - ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್