ಕಾರವಾರ: ಉದ್ಯಮಿ ಹಾಗೂ ಅವರ ಪತ್ನಿ ಮೇಲೆ ಐವರು ಅಪರಿಚಿತರು ತಲ್ವಾರ್ ಹಾಗೂ ಇತರೆ ಮಾರಕಾಸ್ತ್ರದಿಂದ ಮನಸೋಇಚ್ಛೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಣಕೋಣದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಉದ್ಯಮಿಯಾಗಿರುವ ಹಣಕೋಣ ಗ್ರಾಮದ ವಿನಾಯಕ ನಾಯ್ಕ(58) ಎಂಬವರು ಹತ್ಯೆಯಾಗಿದ್ದಾರೆ. ಇವರ ಪತ್ನಿ ವೃಷಾಲಿಗೆ ಗಂಭೀರ ಗಾಯಗಳಾಗಿದ್ದು, ಕಾರವಾರದ ಕ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿನಾಯಕ ನಾಯ್ಕ ಕಳೆದ ಕೆಲ ವರ್ಷದಿಂದ ಪುಣಾದಲ್ಲಿ ಪ್ರೋಸೆಸ್ ಇನ್ಸಟ್ರೂಮೆಂಟ್ ಎಂಬ ಪ್ಯಾಕ್ಟರಿಯಲ್ಲಿ ಆಮದು ರಫ್ತಿನ ವ್ಯವಹಾರ ನಡೆಸುತ್ತಿದ್ದರು. ಪ್ರತಿ ವರ್ಷದಂತೆ ಈ ಬಾರಿಯೂ ಸಾತೇರಿ ದೇವಿ ಜಾತ್ರೆಗೆ ಆಗಮಿಸಿದ್ದ ಅವರು ಭಾನುವಾರ ಬೆಳಗ್ಗೆ ಪುನಃ ಪುಣೆಗೆ ತೆರಳುವ ಸಿದ್ಧತೆಯಲ್ಲಿರುವಾಗಲೇ ಈ ಹತ್ಯೆ ನಡೆದಿದೆ.
ವಿನಾಯಕ ನಾಯಕ್ ಅವರು ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಮನೆ ಮುಂದಿದ್ದ ಕಾರಿನಲ್ಲಿ ಬಟ್ಟೆಗಳನ್ನು ಇಟ್ಟು ವಾಪಸ್ ಮನೆ ಒಳಗಡೆ ತೆರಳುವ ವೇಳೆ ಅಪರಿಚಿತ ಮೂವರು ತಲ್ವಾರ್, ಚಾಕು ಹಾಗೂ ಇನ್ನಿತರ ಮಾರಕಾಸ್ತ್ರಗಳಿಂದ ದಾಳಿಗೈದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೂಗಾಡಿಕೊಂಡು ಅಡುಗೆ ಮನೆ ಕಡೆ ಓಡಿದರೂ ಬಿಡದೇ ಹಲವು ಭಾರಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾತರೂಮಿನಲ್ಲಿದ್ದ ಹೆಂಡತಿಯು ಗಂಡನ ಕೂಗಾಟ ಕೇಳಿ ಬಂದು ತಡೆಯಲು ಮುಂದಾದಾಗ ಅವರ ಮೇಲೆಯೂ ಹಲ್ಲೆ ಮಾಡಲಾಗಿದೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದು, ಹಲ್ಲೆಗೊಳಗಾದ ವೃಷಾಲಿ ತನ್ನ ಸಂಬಂಧಿಕರಿಗೆ ಫೋನ್ ಮಾಡಿ ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಸಂಬಂಧಿಕರು ಆಂಬ್ಯುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ತಕ್ಷಣ ತೆರಳಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾಹಿತಿ ನೀಡಿದ್ದಾರೆ.
ವಿನಾಯಕ ಮೇಲೆ ಹರಿತವಾದ ಆಯುಧದಿಂದ ಭುಜದ ಮೇಲೆ ಮೂವರು ಅಪರಿಚಿತರು ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತ ಸ್ರಾವದಿಂದ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಪ್ರೋಸೆಸ್ ಇನ್ಸಟ್ರೂಮೆಂಟ್ ಎಂಬ ಪ್ಯಾಕ್ಟರಿಯಲ್ಲಿ ಆಮದು ರಫ್ತಿನ ವ್ಯವಹಾರ ನಡೆಸುತ್ತಿದ್ದರು. ಇಲ್ಲಿ ಆಸ್ತಿ ಇಲ್ಲ. ಆದರೆ ಪುಣಾದಲ್ಲಿಯೇ ಅವರ ಆಸ್ತಿ ಇದೆ. ಹಲವು ಆಯಾಮಗಳಲ್ಲಿ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಎಸ್ಪಿ ತಿಳಿಸಿದ್ದಾರೆ.
ಇನ್ನು ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ್ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಇಳಿದಿದೆ. ಕಾರಿನಲ್ಲಿ ಬಂದ ಅಪರಿಚಿತರು ದುಷ್ಕೃತ್ಯ ಎಸೆಗಿ ಪರಾರಿಯಾಗಿದ್ದು ಗ್ರಾಮಕ್ಕೆ ತೆರಳುವ ರಸ್ತೆಗಳಲ್ಲಿನ ಸಿಸಿಟಿವಿಯಲ್ಲಿ ಕಾರಿನ ಓಡಾಟವನ್ನು ಗಮನಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿನಾಯಕನ ಹತ್ಯೆ ಉದ್ಯಮದಲ್ಲಿನ ದ್ವೇಷ ಕಾರಣ ಇರಬಹುದು ಎನ್ನುವ ಅಂದಾಜು ಮಾಡಲಾಗಿತ್ತು. ಆದರೆ ಸದ್ಯ ವೈಯಕ್ತಿಕ ವಿಚಾರದಲ್ಲೂ ಕೊಲೆಯಾಗಿರಬಹುದು ಎಂದು ಶಂಕಿಸಿ ತನಿಖೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮೃತ ವಿನಾಯಕ ಉದ್ಯಮದಲ್ಲಿ ಯಶಸ್ಸು ಕಂಡು ಆರ್ಥಿಕವಾಗಿಯೂ ಉತ್ತಮವಾಗಿದ್ದರು. ಪತ್ನಿ ವೈಶಾಲಿ ನಾಯ್ಕ ಕಾರವಾರ ಮೂಲದವರಾಗಿದ್ದು, ಪತಿ ಜೊತೆ ಪುಣಾದಲ್ಲಿ ನೆಲೆಸಿದ್ದರು. ಇವರಿಗೆ ಓರ್ವ ಪುತ್ರನಿದ್ದು, ಆತ ಯುಎಸ್ನಲ್ಲಿ ಎಂಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಎರಡು ಬಾರಿ ಗ್ರಾಮಕ್ಕೆ ಆಗಮಿಸುವ ವಿನಾಯಕ, ತನ್ನ ಮನೆಯಲ್ಲಿ ಕೆಲ ದಿನ ಇದ್ದು ವಾಪಾಸ್ ತೆರಳುತ್ತಿದ್ದರು. ತಾಯಿಯ ವರ್ಷದ ತಿಥಿ ಕಾರ್ಯವನ್ನು ಶನಿವಾರ ವಿನಾಯಕ ಮುಗಿಸಿದ್ದು, ಭಾನುವಾರ ವಾಪಸ್ ಪುಣಾಕ್ಕೆ ತೆರಳಲು ಮುಂದಾಗಿದ್ದರು. ಅಷ್ಟರಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯವನ್ನು ಗಮನಿಸಿದರೆ ಇದನ್ನು ಸ್ಥಳೀಯರು ಮಾಡಿದಂತೆ ಕಾಣುವುದಿಲ್ಲ. ಯಾರೋ ಹೊರಗಿನವರು ಈ ರೀತಿ ಭೀಕರ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಕಾರವಾರ ಡಿವೈಎಸ್ಪಿ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿದೆ.
ಇದನ್ನೂ ಓದಿ: ಕಾರವಾರದ ಈ ದೇಗುಲದಲ್ಲಿ ವರ್ಷಕ್ಕೆ 7 ದಿನ ಮಾತ್ರ ಭಕ್ತರಿಗೆ ದೇವಿಯ ದರ್ಶನ! - Sateri Devi Temple