ಬೆಂಗಳೂರು: ರಾಜಧಾನಿಯಲ್ಲಿ ಜನರಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಲು 233 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವದ ವಿಜ್ಞಾನ ನಗರಿ ಸ್ಥಾಪನೆಯ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆ ವಿದ್ಯಾರ್ಥಿಗಳು ಮತ್ತು ಉದ್ಯಮಗಳನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಹಾಕಿಕೊಂಡಿದೆ. ಸ್ಟಾರ್ಟಪ್‌ಗಳನ್ನು ಪ್ರೇರೇಪಿಸಲು ರಾಜೀವ್ ಗಾಂಧಿ ವಾಣಿಜ್ಯೋದ್ಯಮ ಕಾರ್ಯಕ್ರಮ ಮತ್ತು ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಮಹಿಳಾ ಉತ್ಕೃಷ್ಟತೆ ಮತ್ತು ಉದ್ಯಮಶೀಲತೆ ಬೆಂಬಲ ಕಾರ್ಯಕ್ರಮ ಪ್ರಮುಖವಾಗಿದೆ.
ಭಾರತದಲ್ಲೇ ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದ್ದು, ಅದನ್ನು ಉಳಿಸಿಕೊಳ್ಳಲು ಹಲವು ಕ್ರಮಗಳನ್ನು ಸಹ ಘೋಷಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅಗ್ರಿ ಇನ್ನೋವೇಶನ್ ಸ್ಟಾರ್ಟ್ ಅಪ್ ಸ್ಥಾಪಿಸಲು ಸಿ-ಕ್ಯಾಂಪ್ ಅಗ್ರಿ ಇನ್ನೋವೇಶನ್ ಪಾರ್ಕ್‌ಗೆ 5 ಎಕರೆ ಭೂಮಿ ಮೀಸಲಿಡಲಾಗಲಿದೆ. ಉದಯೋನ್ಮುಖ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಫಿನ್ಟೆಕ್, ಸ್ಪೇಸ್ಟೆಕ್ ಮತ್ತು ಆಟೋಮೋಟಿವ್ ಟೆಕ್‌ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆಯಾಗಲಿದೆ. ಈ ಎಕ್ಸಲೆನ್ಸ್ ಸೆಂಟರ್ 5 ವರ್ಷಗಳ ಅವಧಿಯಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಉದ್ಯಮಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯರೋಪಕ್ಕೆ ಬರಲಿದೆ.
ಬೆಂಗಳೂರು ನಗರದಲ್ಲಿ 400ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳಿದ್ದು, ಇನ್ನಷ್ಟು ಕೇಂದ್ರಗಳನ್ನು ಸ್ಥಾಪಿಸಿ ಹೂಡಿಕೆ ಆಕರ್ಷಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಹಾಗು ಕಿಯೋನಿಕ್ಸ್ ಸಹಯೋಗದೊಂದಿಗೆ 2 ಕೋಟಿ ರೂ ವೆಚ್ಚದಲ್ಲಿ ಉದಯೋನ್ಮುಖ ತಂತ್ರಜ್ಞಾನ, ಕೌಶಲ್ಯ ಮತ್ತು ನಾವೀನ್ಯತಾ ಕೇಂದ್ರ ಸ್ಥಾಪನೆಯನ್ನು ಕೂಡ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ರಾಜ್ಯದಲ್ಲಿ ಜಿನೋಮಿಕ್ ಅಧ್ಯಯನ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ಸುಧಾರಿತ ಜಿನೋಮ್ ಎಡಿಟಿಂಗ್ ಮತ್ತು ಜೀನ್ ಥೆರಪಿ ಕೇಂದ್ರ ಸ್ಥಾಪನೆ, 30,000 ಹೊಸ ಉದ್ಯೋಗ ಸೃಷ್ಟಿಸಲು 50 ಕೋಟಿ ರೂ ವೆಚ್ಚದಲ್ಲಿ ಜಾರಿಗೆ ಗೇಮಿಂಗ್ ಸೆಂಟರ್ ಆಫ್ ಎಕ್ಸೆಲೆನ್ಸ್ ಕೇಂದ್ರದ ಉಲ್ಲೇಖವನ್ನು ಬಜೆಟ್‌ನಲ್ಲಿ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಹಾಗು ತಂತ್ರಜ್ಞಾನದ ಬೆಳವಣಿಗೆಗಳ ಉತ್ತೇಜನೆಗೆ 170 ಕೋಟಿ ರೂ. ಮೀಸಲಿಡಲಾಗಿದೆ. ಚಾಮರಾಜನಗರ, ಹಾಸನ, ಮಡಿಕೇರಿ, ಶಿರಸಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಧಾರವಾಡದಲ್ಲಿ ವಿಜ್ಞಾನ ಕೇಂದ್ರ/ತಾರಾಲಯಗಳನ್ನು ಕಾರ್ಯಾರಂಭ ಮಾಡಲಾಗುತ್ತಿದೆ. ಉಡುಪಿ, ಹಾವೇರಿ, ಚಿತ್ತಾಪುರ, ಆದಿಚುಂಚನಗಿರಿ, ತುಮಕೂರಿನಲ್ಲಿ ವಿಜ್ಞಾನ ಕೇಂದ್ರಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಲಾಗಿದೆ.
ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ಯಾದಗಿರಿ ಮತ್ತು ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ವಿಜ್ಞಾನ ಕೇಂದ್ರ/ತಾರಾಲಯ ಹೊಸದಾಗಿ ಸ್ಥಾಪನೆ. ವಿದ್ಯಾರ್ಥಿಗಳಿಗೆ ರಾತ್ರಿ ಆಕಾಶ ವೀಕ್ಷಣೆ ಮತ್ತು ಆಕಾಶ ಕಾಯಗಳ ಕುರಿತು ಆಸಕ್ತಿ ಮೂಡಿಸಲು 833 ವಸತಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ತಲಾ ಒಂದು ದೂರದರ್ಶಕ ಒಟ್ಟಾರೆ 3 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂಡಿಯಾ ನ್ಯಾನೋ ಅಂತಾರಾಷ್ಟ್ರೀಯ ಸಮ್ಮೇಳನ, ಒಂದು ತಿಂಗಳ ಕಾಲದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವ ನಡೆಸುವುದಾಗಿ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಘೋಷಿಸಿದೆ.
ಇದನ್ನೂ ಓದಿ: ರೈತರಿಗೆ ಸಿದ್ದು ಬಂಪರ್ ಕೊಡುಗೆ: 36 ಲಕ್ಷ ರೈತರಿಗೆ 27,000 ಕೋಟಿ ರೂ.ಗಳಷ್ಟು ಸಾಲ ವಿತರಿಸುವ ಗುರಿ