ಬೆಂಗಳೂರು: ಇಡ್ಲಿ, ವಡಾ, ದೋಸೆ, ಬಗೆಬಗೆಯ ರೈಸ್ ಖಾದ್ಯಗಳು ಮತ್ತು ಪೊಂಗಲ್ ಸೇರಿದಂತೆ ತರಹೇವಾರಿ ಸಸ್ಯಹಾರಿ ಖಾದ್ಯಗಳಿಗೆ ರಾಮೇಶ್ವರಂ ಕೆಫೆ ಫೇಮಸ್. ಅಂತೆಯೇ ಇಲ್ಲಿನ ರುಚಿ ಸವಿಸಲು ಜನ ಆಗಮಿಸುವುದು ಕಾಮನ್. ಈ ಕೆಫೆಯಲ್ಲಿ ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿದ್ದು, 10 ಜನರು ಗಾಯಗೊಂಡಿದ್ದಾರೆ. ಸದ್ಯ ಸುದ್ದಿಯಲ್ಲಿರುವ ಕೆಫೆ ವೈಶಿಷ್ಟ್ಯವೇನು? ಇದಕ್ಕೆ ರಾಮೇಶ್ವರಂ ಎಂಬ ಹೆಸರಿಟ್ಟಿದ್ಯಾಕೆ? ಎಂಬುದರ ಸಂಕ್ಷೀಪ್ತ ವರದಿ ಇಲ್ಲಿದೆ.
ರಾಮೇಶ್ವರಂ ಎಂದಾಕ್ಷಣ ನೆನಪಾಗುವವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಏಕೆಂದರೆ ರಾಮೇಶ್ವರಂ ಅವರ ಹುಟ್ಟೂರು. ರಾಮೇಶ್ವರಂ ಕೆಫೆಯ ಸಂಸ್ಥಾಪಕರು ಕೂಡ ಅಬ್ದುಲ್ ಕಲಾಂ ಅವರಿಂದ ಪ್ರೇರಣೆಗೊಂಡು ಈ ಕೆಫೆ ಆರಂಭಿಸಿದ್ದರು. ಅಂತೆಯೇ ಇದಕ್ಕೆ ರಾಮೇಶ್ವರಂ ಎಂದು ಹೆಸರಿಟ್ಟದ್ದರು ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಭಾರತದ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಶಾಖೆಗಳನ್ನು ಆರಂಭಿಸುವುದು ರಾಘವೇಂದ್ರ ರಾವ್ ಮತ್ತು ದಿವ್ಯಾ ರಾಘವೇಂದ್ರ ರಾವ್ ಅವರ ಕನಸಾಗಿತ್ತು. ಅಂತೆಯೇ 2021ರಲ್ಲಿ ಬೆಂಗಳೂರಲ್ಲಿ ರಾಮೇಶ್ವರಂ ಕೆಫೆ ಹೆಸರಲ್ಲಿ ಎರಡು ಔಟ್ ಲೆಟ್ ಆರಂಭಿಸಿದ್ದರು.
ರಾಮೇಶ್ವರಂ ಕೆಫೆಯ ಬಗ್ಗೆ ಒಂದಷ್ಟು: - ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ (QSR): ರಾಮೇಶ್ವರಂ ಕೆಫೆ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್ ಆಗಿದ್ದು, ಇದನ್ನು ಸ್ಥಳೀಯವಾಗಿ 'ದರ್ಶಿನಿ' ಅಂತಾರೆ. ಸ್ಥಳ, ಕಡಿಮೆ ದರ ಮತ್ತು ರುಚಿಯಿಂದಲೇ ಇದು ಹೆಸರುವಾಸಿ.
ಇಂಜಿನಿಯರ್ ಮತ್ತು ಸಿಎ ಸಂಸ್ಥಾಪಕರು: ರಾಮೇಶ್ವರಂ ಕೆಫೆಯ ಸಂಸ್ಥಾಪಕರಾದ ರಾಘವೇಂದ್ರ ರಾವ್ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ದಿವ್ಯಾ ರಾಘವೇಂದ್ರ ರಾವ್ ಚಾರ್ಟೆಡ್ ಅಕೌಂಟಂಟ್ ಪದವೀಧರರಾಗಿದ್ದರು. ರಾಘವೇಂದ್ರ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರೂ ಹೋಟೆಲ್ ಉದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷ ಅನುಭವ ಹೊಂದಿದ್ದಾರೆ.
ಕೆಫೆಯ ಹಿಂದಿನ ಐಡಿಯಾ: ದೇಶಾದ್ಯಂತ ಕಲಬೆರಕೆಯಿಲ್ಲದ ದಕ್ಷಿಣ ಭಾರತೀಯ ಖಾದ್ಯಗಳನ್ನು ಉಣಬಡಿಸುವ ಉದ್ದೇಶದಿಂದ ಸಂಸ್ಥಾಪಕರು ಕೆಫೆಯನ್ನು ಪ್ರಾರಂಭಿಸಿದ್ದರು ಎಂದು ವರದಿಯಾಗಿದೆ.
ಅಬ್ದುಲ್ ಕಲಾಂ ಅವರಿಗೆ ಅರ್ಪಣೆ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸರಳತೆ, ತಾಳ್ಮೆ ಮತ್ತು ಆದರ್ಶಗಳಿಂದ ಕೆಫೆ ಸಂಸ್ಥಾಪಕರು ಪ್ರೇರಣೆಗೊಂಡಿದ್ದರು. ಅಂತೆಯೇ ಕಲಾಂ ಅವರಿಗೆ ಗೌರವ ಸಲ್ಲಿಸಲು ಅವರ ಹುಟ್ಟೂರು ರಾಮೇಶ್ವರಂ ಹೆಸರನ್ನು ಕೆಫೆಗೆ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಫೆಯ ತಿಂಗಳ ಆದಾಯ ಎಷ್ಟು?: ಈ ಕೆಫೆ ತಿಂಗಳಿಗೆ 4.5 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದೆ. ವರ್ಷಕ್ಕೆ ಸುಮಾರು 50 ಕೋಟಿ ರೂಪಾಯಿವರೆಗೆ ಬ್ಯುಜಿನೆಸ್ ಆಗುತ್ತದೆ ಎಂದು ವರದಿಗಳಿಂದ ಗೊತ್ತಾಗುತ್ತದೆ.
ಕೆಫೆಯ ಫೇಮಸ್ ಭಕ್ಷ್ಯಗಳು: ತುಪ್ಪದ ಇಡ್ಲಿ, ತುಪ್ಪದ ತಟ್ಟಿ ಇಡ್ಲಿ, ತುಪ್ಪದ ಮಸಾಲೆ ದೋಸೆ, ಬೆಣ್ಣೆ ಮಸಾಲಾ ದೋಸೆ, ಬೆಳ್ಳುಳ್ಳಿ ರೋಸ್ಟ್ ದೋಸೆ, ಅಕ್ಕಿ ರೊಟ್ಟಿ, ಗೊಂಗುರ ಅನ್ನ, ವೆನ್ ಪೊಂಗಲ್, ವಡಾ, ತುಪ್ಪ, ಸಾಂಬಾರ್ ಬಟನ್ ಇಡ್ಲಿಯಿಂದ ರಾಮೇಶ್ವರಂ ಕೆಫೆ ಜನಪ್ರಿಯವಾಗಿದೆ. ಜೊತೆಗೆ ಫಿಲ್ಟರ್ ಕಾಫಿ ಕೂಡ ಮತ್ತೆ ಮತ್ತೆ ಕೆಫೆಗೆ ಕರೆ ತರುತ್ತದೆ.
ಕೆಫೆ ಉದ್ಯೋಗಿಗಳಿಗೆ ವಿಮೆ: ಕೆಫೆಯಲ್ಲಿನ ಉದ್ಯೋಗಿಗಳಿಗೆ ವೈದ್ಯಕೀಯ ವಿಮೆ, ವಸತಿ ಮತ್ತು ಇತರ ಉದ್ಯೋಗಿ ಪ್ರಯೋಜನಗಳನ್ನು ಒದಗಿಸಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಾಚೆಗೂ ಹರಡಿದ ಸವಿ: ಬೆಂಗಳೂರು ಬಳಿಕ ರಾಮೇಶ್ವರಂ ಕೆಫೆ ಮುಂಬೈ, ದೆಹಲಿ, ಪುಣೆ, ಚೆನ್ನೈ, ಹೈದರಾಬಾದ್ ಮತ್ತು ಅಹಮದಾಬಾದ್‌ನಲ್ಲಿಯೂ ಶಾಖೆಗಳನ್ನು ತೆರೆದಿದೆ.
ಜನಪ್ರಿಯ ಹೋಟೆಲ್ಗಳ ಮೇಲೆ ಈವರೆಗಿನ ದಾಳಿಗಳ ಮಾಹಿತಿ:- ಹೈದರಾಬಾದ್ನಲ್ಲಿ ಗೋಕುಲ್ ಚಾಟ್ ಭಂಡಾರ್ ಸ್ಫೋಟ: ಹೈದರಾಬಾದ್‌ನ ಕೋಟಿ ಬಸ್ ನಿಲ್ದಾಣದ ಬಳಿಯ ಜನಪ್ರಿಯ ಸ್ನ್ಯಾಕ್ ಬಾರ್ ಗೋಕುಲ್ ಚಾಟ್ ಪ್ರವೇಶದ್ವಾರದಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಿ ಆಗಸ್ಟ್ 25, 2007 ರಂದು ಸ್ಫೋಟ ಕೃತ್ಯ ಎಸಗಲಾಗಿತ್ತು. ಆ ವೇಳೆ 32 ಜನರು ಸಾವನ್ನಪ್ಪಿದ್ದರು.
ಲಿಯೋಪೋಲ್ಡ್ ಕೆಫೆ: 2008 ರ 26/11 ಭಯೋತ್ಪಾದಕ ದಾಳಿಗೆ ಮೊದಲು ಗುರಿಯಾಗಿದ್ದೇ ದಕ್ಷಿಣ ಮುಂಬೈನ ಜನಪ್ರಿಯ ರೆಸ್ಟೋರೆಂಟ್ ಮತ್ತು ಬಾರ್ ಲಿಯೋಪೋಲ್ಡ್ ಕೆಫೆ. 2008ರ ದಾಳಿ ವೇಳೆ ಇಲ್ಲೇ ಮೊದಲು ಗುಂಡಿನ ದಾಳಿ ಮತ್ತು ಬ್ಲಾಸ್ಟ್ ಸಂಭವಿಸಿತ್ತು. ಇದರಲ್ಲಿ 10 ಜನ ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು.
ಜರ್ಮನ್ ಬೇಕರಿ ಸ್ಫೋಟ: 2010 ರ ಪುಣೆ ಬಾಂಬ್ ಸ್ಫೋಟವನ್ನು ಜರ್ಮನ್ ಬೇಕರಿ ಸ್ಫೋಟ ಎಂದೂ ಕರೆಯುತ್ತಾರೆ. ಮಹಾರಾಷ್ಟ್ರದ ಪುಣೆ ನಗರದಲ್ಲಿನ ಜರ್ಮನ್ ಬೇಕರಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ 18 ಜನರು ಬಲಿಯಾಗಿದ್ದರು. ಇಟಾಲಿಯನ್ ಮಹಿಳೆ, ಇಬ್ಬರು ಸುಡಾನ್ ವಿದ್ಯಾರ್ಥಿಗಳು ಮತ್ತು ಇರಾನ್ ವಿದ್ಯಾರ್ಥಿ ಸೇರಿದಂತೆ ಕನಿಷ್ಠ 60 ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ: ಕೆಫೆ ಸೂಪರ್ವೈಸರ್ ನೀಡಿದ ದೂರಿನಲ್ಲೇನಿದೆ?