ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 15ನೇ ಬಜೆಟ್ ವಾಣಿಜ್ಯ ಮತ್ತು ಕೈಗಾರಿಕಾಸ್ನೇಹಿಯಾಗಿದೆ. ಬಂಡವಾಳ ಹೂಡಿಕೆ ವಾತಾವರಣ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಹೊಸ ಕೈಗಾರಿಕಾ ನೀತಿ ಮತ್ತು ನೂತನ ಪ್ರವಾಸೋದ್ಯಮ ನೀತಿ ಘೋಷಣೆ ಬಗ್ಗೆ ಆಯವ್ಯಯದಲ್ಲಿ ಪ್ರಸ್ತಾಪಿಸಿರುವುದು ಸ್ವಾಗತಾರ್ಹ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಭಿಪ್ರಾಯಪಟ್ಟಿದೆ.
ಬಜೆಟ್ನಲ್ಲಿ ಎಫ್ಕೆಸಿಸಿಐ ನೀಡಿದ ಸಲಹೆಗಳನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ಪರಿಗಣಿಸಿದ್ದಾರೆ. ಎಪಿಎಂಸಿ ಡಿಜಿಟಲೀಕರಣ, ಕೃಷಿ ಮಾರುಕಟ್ಟೆಯ ಹಳೆ ಕಾಯ್ದೆ ವಾಪಸ್ ತರಲು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈ ಬಗ್ಗೆ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಬೇಡಿಕೆಯನ್ನು ಪರಿಗಣಿಸಲಾಗಿದೆ ಎಂದು ಲಹೋಟಿ ಅವರು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದರು.
ಪ್ರವಾಸೋದ್ಯಮಕ್ಕೆ ಮುಂಗಡಪತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಿರುವುದು ಸಂತಸ ಉಂಟುಮಾಡಿದೆ. ಮೂಲಭೂತ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯವಾಗಿದ್ದು, 2025ರ ಫೆಬ್ರುವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವ ಬಗ್ಗೆ ಮುಂಗಡಪತ್ರದಲ್ಲಿ ಘೋಷಣೆ ಮಾಡಲಾಗಿದೆ. ಹೂಡಿಕೆದಾರರ ಸಮಾವೇಶದ ಪ್ರಯೋಜನ ದೊರೆಯಬೇಕಾದರೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯನ್ನು ರಾಜ್ಯ ಸರಕಾರ ಮಾಡಬೇಕಾಗುತ್ತದೆ. ಆಗ ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಬಂಡವಾಳ ಹೂಡಿಕೆದಾರರು ಆಸಕ್ತಿ ತೋರಿಸುತ್ತಾರೆ. ಉದ್ಯೋಗವೂ ಸೃಷ್ಟಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಮುಂಗಡ ಪತ್ರದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಮಾಡುವ ಬಗ್ಗೆ ತಿಳಿಸಲಾಗಿದೆ. ಗ್ಯಾರಂಟಿ ಯೋಜನೆಗಳು ಮತ್ತು ಜನರ ಅನುಕೂಲದ ದೃಷ್ಟಿಯಿಂದ ಸಾಲ ಅನಿವಾರ್ಯ. ಆದರೆ ಹೆಚ್ಚಿನ ಸಾಲ ಬೊಕ್ಕಸಕ್ಕೆ ಹೊರೆಯಾಗುವುದು ನಿಶ್ಚಿತ. ರಾಜ್ಯ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿರುವುದರಿಂದ ಹೆಚ್ಚಿನ ಸಾಲ ಕಷ್ಟವಾಗಲಾರದು. ಎರಡು ವರ್ಷದಲ್ಲಿ ಸಾಲದ ಹೊರೆ ತಗ್ಗಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇದು ಸಮಾಧಾನಕರವಾಗಿದೆ ಎಂದರು.
ಬಜೆಟ್ನಲ್ಲಿ ಹೊಸ ತೆರಿಗೆ ಹಾಕದಿರುವುದು ಮತ್ತು ತೆರಗೆ ಏರಿಕೆ ಮಾಡುವ ಕುರಿತು ಪ್ರಸ್ತಾಪ ಮಾಡಿಲ್ಲ. ಇದು ಸಂತಸದ ಸಂಗತಿ ಎಂದು ತಿಳಿಸಿರುವ ಲಹೋಟಿ, ಬ್ರ್ಯಾಂಡ್ ಬೆಂಗಳೂರು ಯೋಜನೆಯ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮೆಗಾ ಟೆಕ್ಸ್‌ಟೈಲ್ ಪಾರ್ಕ್, ವಚನ ಮಂಟಪ ಸ್ಥಾಪನೆ: ಕಲಬುರಗಿಗೆ ಇನ್ನೂ ಹಲವು ಕೊಡುಗೆಗಳು