ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ತಿರುವಿನಲ್ಲಿ ಕೆಎಸ್ಆರ್ಟಿಸಿ ಬಸ್ಸೊಂದರ ಬ್ರೇಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಿಂದ ತಪ್ಪಿದ ಘಟನೆ ನಡೆದಿದೆ. ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾರ್ಮಾಡಿ ಘಾಟಿಯ ತಿರುವಿನಲ್ಲಿ ಬ್ರೇಕ್ ವೈಫಲ್ಯಕ್ಕೀಡಾಗಿದೆ. ಇದನ್ನು ಅರಿತ ಚಾಲಕ ಸಮಯಪ್ರಜ್ಞೆ ಮೆರೆದಿದ್ದು, ರಸ್ತೆಬದಿಯ ಡಿವೈಡರ್ಗೆ ಡಿಕ್ಕಿ ಹೊಡೆಸಿ ಬಸ್ ನಿಲ್ಲುವಂತೆ ಮಾಡಿದ್ದಾನೆ.
ಚಾಲಕ, ನಿರ್ವಾಹಕ ಸೇರಿ ಒಟ್ಟು 45 ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಅತ್ಯಂತ ಅಪಾಯಕಾರಿ ತಿರುವುಗಳಿಂದ ಕೂಡಿರುವ ಚಾರ್ಮಾಡಿ ಘಾಟಿಯಲ್ಲಿ ಚಾಲಕ ತೋರಿದ ಸಮಯಪ್ರಜ್ಞೆ ಪ್ರಯಾಣಿಕರ ಜೀವ ಉಳಿಸಿದೆ. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೋಲಾರ: ಕೆರೆಗೆ ಕಾಲು ಜಾರಿ ಬಿದ್ದು ತಾಯಿ - ಮಗ ಸಾವು
ಆಯತಪ್ಪಿ ಬಿದ್ದು ಕೆಎಸ್ಆರ್ಟಿಸಿ ಕಂಡಕ್ಟರ್ ಸಾವು(ಮೈಸೂರು): ಕೆಎಸ್ಆರ್ಟಿಸಿ ಬಸ್ನ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಆಯತಪ್ಪಿ ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ. ಮಹದೇವಸ್ವಾಮಿ (35) ಮೃತ ದುರ್ದೈವಿಯಾಗಿದ್ದಾರೆ. ಮೃತರು ಚಾಮರಾಜನಗರ ತಾಲೂಕಿನ ಹರವೆ ಹೋಬಳಿಯ ಹಳೇಪುರ ಗ್ರಾಮದವರು ಎಂಬುದಾಗಿ ತಿಳಿದು ಬಂದಿದೆ.
ಇಂದು (ಶುಕ್ರವಾರ) ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಂಜನಗೂಡು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಮೈಸೂರಿಗೆ ತೆರಳುತ್ತಿದ್ದ ವೇಳೆ ಮಲ್ಲನಮೂಲೆ ಮಠದ ಬಳಿ ಬಸ್ ವೇಗವಾಗಿ ಸಂಚರಿಸಿದೆ. ಬಾಗಿಲ ಬಳಿ ನಿಂತಿದ್ದ ಕಂಡಕ್ಟರ್ ಮಹದೇವಸ್ವಾಮಿ ಆಯತಪ್ಪಿ ಬಿದ್ದಿದ್ದಾರೆ. ಕೆಳಗಡೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು, ಸಾವನ್ನಪ್ಪಿದ್ದಾರೆ.