ಬೆಂಗಳೂರು: ಬಿಎಂಟಿಸಿ ನೌಕರರಿಗೂ ಕೆಎಸ್‌ಆರ್‌ಟಿಸಿ ನೌಕರರ ಮಾದರಿಯಲ್ಲೇ ಒಂದು ಕೋಟಿ ರೂಪಾಯಿ ಅಪಘಾತ ವಿಮೆ ನೀಡಲು ಸರ್ಕಾರ ಮುಂದಾಗಿದೆ. ಇಂದಿನಿಂದಲೇ ಈ ವಿಮಾ ಸೌಲಭ್ಯ ಜಾರಿಯಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ನೌಕರರಿಗೆ ಅಪಘಾತ ವಿಮಾ ಪರಿಹಾರವನ್ನು 1 ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಈ ಬೆನ್ನಲ್ಲೇ ಬಿಎಂಟಿಸಿ ನೌಕರರಿಗೂ 3 ಲಕ್ಷ ರೂಪಾಯಿ ಇದ್ದಂತಹ ಅಪಘಾತ ವಿಮಾ ಪರಿಹಾರ ಮೊತ್ತವನ್ನು 1 ಕೋಟಿ ರೂ.ಗೆ ಹೆಚ್ಚಳ ಮಾಡಿ ಸರಕಾರ ಆದೇಶಿಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೆಎಸ್‌ಆರ್‌ಟಿಸಿಯಂತೆ ಬಿಎಂಟಿಸಿ ನೌಕರರಿಗೂ ಅಪಘಾತ ವಿಮಾ ಪರಿಹಾರದ ಮೊತ್ತವನ್ನು 1 ಕೋಟಿಗೆ ಹೆಚ್ಚಿಸುವುದಕ್ಕೆ ಸೂಚನೆ ನೀಡಿದ್ದಾರೆ. ಅವರ ಸೂಚನೆ ಮೇರೆಗೆ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೆಎಸ್‌ಆರ್‌ಟಿಸಿ ನೌಕರರು ಸಾವನ್ನಪ್ಪಿದರೆ ಮಾತ್ರ ಒಂದು ಕೋಟಿ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಬಿಎಂಟಿಸಿ ನೌಕರರಿಗೆ ಕೇವಲ ಮೂರು ಲಕ್ಷ ರೂಪಾಯಿ ಪರಿಹಾರವಿತ್ತು. ಆದರೆ ಇದೀಗ ಈ ವಿಮಾ ಸೌಲಭ್ಯ ಜಾರಿಯಾಗಿದ್ದು, ಬಿಎಂಟಿಸಿಯ 28 ಸಾವಿರ ನೌಕರರ ಕುಟುಂಬಗಳಿಗೆ ಈ ವಿಮಾ ಸೌಲಭ್ಯ ದೊರೆಯಲಿದೆ. ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿಲ್ಲದಿದ್ದಾಗಲೂ ಸಂಭವಿಸುವ ಅಪಘಾತಕ್ಕೂ 1 ಕೋಟಿ 15 ಲಕ್ಷ ರುಪಾಯಿ ಪರಿಹಾರ ಸಿಗುತ್ತದೆ. ಸಿಬ್ಬಂದಿ ಸಾಮಾನ್ಯವಾಗಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ಕಮಿಷನ್ ವಿಚಾರ: ಯತ್ನಾಳ್ - ಡಿಕೆಶಿ ಮಧ್ಯೆ ಪರಸ್ಪರ ಏಕವಚನದಲ್ಲೇ ವಾಕ್ ಸಮರ