ಮಂಗಳೂರು(ದಕ್ಷಿಣ ಕನ್ನಡ): ದಾನಗಳಲ್ಲಿ ರಕ್ತದಾನವೂ ಶ್ರೇಷ್ಠ ಎಂಬುದು ಪ್ರಸ್ತುತ ಕಾಲಘಟ್ಟದ ನಂಬಿಕೆ. ಒಂದು ಜೀವವನ್ನು ಉಳಿಸಲು ರಕ್ತ ಎಷ್ಟು ಅವಶ್ಯಕವೆಂಬುದು ಎಲ್ಲರಿಗೂ ಅರಿವಿದೆ. ಇದರ ಬಗ್ಗೆ ಅರಿವಿರುವ ಸರ್ಕಾರಿ ಅಧಿಕಾರಿಯೊಬ್ಬರು ತಾವು 80 ಬಾರಿ ರಕ್ತದಾನ ಮಾಡಿದ್ದಲ್ಲದೆ, ಈ ಬಗ್ಗೆ ಹಲವರಲ್ಲಿ ಜಾಗೃತಿ ಮೂಡಿಸುವಲ್ಲೂ ಯಶಸ್ವಿಯಾಗಿದ್ದಾರೆ.
ಇಂದು ವಿಶ್ವ ರಕ್ತದಾನಿಗಳ ದಿನದ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯ ರಕ್ತಬ್ಯಾಂಕ್‌ನಲ್ಲಿ ಮೀನುಗಾರಿಕಾ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ ರಕ್ತದಾನ ಮಾಡಿದ್ದಾರೆ. ಈ ಸರ್ಕಾರಿ ಇಲಾಖೆಯ ಸಿಬ್ಬಂದಿಗೆ ರಕ್ತದಾನ ಮಾಡಲು ಪ್ರೇರಣೆಯಾದದ್ದು ದ.ಕ ಜಿಲ್ಲಾ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್ ಖಾರ್ವಿ ಅವರು. ಇವರು ಈ ರಕ್ತದಾನ ಶಿಬಿರದ ರೂವಾರಿ. ಸ್ವತಃ ಅವರೇ ಇಂದು 80ನೇ ಬಾರಿಗೆ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ ತಮ್ಮ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರನ್ನು ಪ್ರೇರೇಪಿಸಿ ರಕ್ತದಾನ ಮಾಡುವಂತೆ ಮಾಡಿದ್ದಾರೆ.
ಮೂಲತಃ ಗಂಗೊಳ್ಳಿಯವರಾದ ದಿವಾಕರ ಖಾರ್ವಿಯವರು ತಮ್ಮ ಕಾಲೇಜು ದಿನಗಳಿಂದಲೇ ರಕ್ತದಾನ ಮಾಡಿದವರು. ಗಂಗೊಳ್ಳಿಯಲ್ಲಿ ಮೀನುಗಾರಿಕೆ ಇಲಾಖೆಯಲ್ಲಿದ್ದಾಗ ಪ್ರತೀ ವರ್ಷ ಈ ದಿನ ರಕ್ತದಾನ ಮಾಡುತ್ತಿದ್ದರು. ವರ್ಷದಿಂದೀಚೆಗೆ ಅವರಿಗೆ ಮಂಗಳೂರಿಗೆ ವರ್ಗಾವಣೆಯಾಗಿದೆ. ಆದ್ದರಿಂದ ಈ ಬಾರಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ರಕ್ತದ ಬ್ಯಾಂಕ್ನಲ್ಲಿ ರಕ್ತದಾನ ಮಾಡಿದ್ದಾರೆ. ಅದರೊಂದಿಗೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ, ಮೀನುಗಾರರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಿದ್ದಾರೆ.
ಈ ಮೂಲಕ ಇಂದು 50ಕ್ಕೂ ಅಧಿಕ ಮಂದಿಯಿಂದ 50 ಯುನಿಟ್ನಷ್ಟು ರಕ್ತದಾನ ನಡೆದಿದೆ. ಇವರಲ್ಲಿ ಮಲ್ಪೆಯ ಮೀನುಗಾರ ಆಸೀಫ್ ಉಳ್ಳಾಲ 101ನೇ ಬಾರಿ ರಕ್ತದಾನ ಮಾಡಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ತಾವು ರಕ್ತದಾನ ಮಾಡಿದ್ದಲ್ಲದೆ, ಉಳಿದವರನ್ನು ಜಾಗೃತಿಗೊಳಿಸಿ ರಕ್ತದಾನ ಮಾಡಿಸಿದ್ದು ಶ್ಲಾಘನೀಯ ಕಾರ್ಯವೆನಿಸಿದೆ.
ದಿವಾಕರ ಖಾರ್ವಿ ಮಾತನಾಡಿ, ''ಇವತ್ತು ಮೀನುಗಾರಿಕಾ ಇಲಾಖೆಯಿಂದ ರಕ್ತದಾನ ಮಾಡಿದ್ದೇವೆ. ನಾವು ಪ್ರತೀ ವರ್ಷ ಗಂಗೊಳ್ಳಿಯಲ್ಲಿ ಮಾಡುತ್ತಿದ್ದೆವು. ನಾನು ಇವತ್ತಿಗೆ 80ನೇ ಬಾರಿ ರಕ್ತದಾನ ಮಾಡಿದ್ದೇನೆ. ನಾನು 1990ರಿಂದ ರಕ್ತದಾನ ಆರಂಭಿಸಿದೆ. ಮೀನುಗಾರಿಕೆ ಇಲಾಖೆಯಲ್ಲಿದ್ದೇನೆ. ನಾನು ಪಿಯುಸಿನಲ್ಲಿದ್ದಾಗ ಅಪಘಾತವಾದಾಗ ಒಬ್ಬ ಯುವಕನ ಪ್ರಾಣ ಉಳಿಸಲು ರಕ್ತದಾನ ಮಾಡಿದ್ದೆ. 2002 ರಿಂದ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೆ'' ಎಂದರು.
ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಶರತ್ ಕುಮಾರ್ ಮಾತನಾಡಿ, ''ದಿವಾಕರ್ ಖಾರ್ವಿ ಅವರು ನಿರಂತರ ರಕ್ತದಾನ ಮಾಡುವವರು. ನಿರಂತರವಾಗಿ ಅವರು ರಕ್ತದಾನ ಮಾಡುತ್ತಿದ್ದಾರೆ. 80 ಬಾರಿ ಅವರು ರಕ್ತದಾನ ಮಾಡಿದ್ದಾರೆ. ಇವತ್ತು ಮೀನುಗಾರಿಕಾ ಇಲಾಖೆಯವರನ್ನು ಒಟ್ಟು ಸೇರಿಸಿ ರಕ್ತದಾನ ಮಾಡಲು ಪ್ರೇರೇಪಿಸಿದ್ದಾರೆ'' ಎಂದರು.
ಇದನ್ನೂ ಓದಿ: ರಕ್ತದ ಗುಂಪು ಕಂಡುಹಿಡಿದ ಡಾ.ಕಾರ್ಲ್ ಲ್ಯಾಂಡ್ ಸ್ಪೇನರ್ ಜನ್ಮದಿನ: ರಕ್ತದಾನಿಗಳ ದಿನಾಚರಣೆ - Blood Donor Day