ಹಾವೇರಿ: ಈಡಿಗ ಸಮಾಜದ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಸಿಎಂ ಹುದ್ದೆಗೆ ಅರ್ಹವಾದ ವ್ಯಕ್ತಿ ಎಂದು ಬ್ರಹ್ಮರ್ಷಿ ನಾರಾಯಣಗುರು ಪೀಠದ ಪ್ರಣವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿಯಲ್ಲಿ ಇಂದು ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ 19 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದರು. 49 ವರ್ಷ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಇಂದಿರಾ ಗಾಂಧಿಯಿಂದ ಹಿಡಿದು ಪ್ರಸ್ತುತ ಪ್ರಿಯಾಂಕಾ ಗಾಂಧಿವರೆಗೆ ಪಕ್ಷಕ್ಕಾಗಿ ಕೆಲಸ ಮಾಡಿದವರು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಈಡಿಗ ಸಮಾಜಕ್ಕೆ ಒಂದೇ ಒಂದು ಸಚಿವ ಸ್ಥಾನ ನೀಡಿದ್ದಾರೆ. ಆದರೆ, ಬಿಜೆಪಿ ಸರ್ಕಾರವಿದ್ದಾಗ ಇಬ್ಬರಿಗೆ ಸಚಿವ ಸ್ಥಾನ, ಮೂವರಿಗೆ ನಿಗಮ ಮಂಡಳಿ ಸ್ಥಾನ ನೀಡಿದ್ದರು ಎಂದರು.
ಕಾಂಗ್ರೆಸ್ ಹೈಕಮಾಂಡ್ ಅಧಿಕಾರ ನೀಡುವಾಗ ಏನು ಹೊಂದಾಣಿಕೆ ಮಾಡಿಕೊಂಡಿತ್ತೋ ಅದರಂತೆ ಬದಲಾವಣೆ ಮಾಡುವುದಾದರೆ ಈಡಿಗ ಸಮಾಜದ ನಾಯಕ ಬಿ.ಕೆ.ಹರಿಪ್ರಸಾದ್‌ಗೆ ಸಿಎಂ ಸ್ಥಾನ ನೀಡಬೇಕು. ಕೊನೆ ಪಕ್ಷ ಡಿಸಿಎಂ ಹುದ್ದೆಯನ್ನಾದರೂ ನೀಡಲಿ. ರಾಜ್ಯ ಸರ್ಕಾರ ರಚನೆಯಾಗುವಾಗ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹರಿಪ್ರಸಾದ್ ಅವರನ್ನು ನೇಮಕ ಮಾಡುವಂತೆ ಹೇಳಿದ್ದರು. ಆದರೆ, ಅವರ ಮಾತನ್ನು ಗಾಳಿಗೆ ತೂರಿ ಸಚಿವ ಸ್ಥಾನವನ್ನೂ ನೀಡದಂತೆ ಅಪಮಾನ ಮಾಡಲಾಗಿದೆ ಎಂದು ದೂರಿದರು.
ನಾರಾಯಣಗುರು ನಿಗಮಕ್ಕೆ ಈ ಕೂಡಲೇ ಹಣ ಬಿಡುಗಡೆ ಮಾಡಬೇಕು ಮತ್ತು ನಮ್ಮ ಕುಲಕಸುಬು ಶೇಂದಿ ತಯಾರಿಕೆ ನಿಲ್ಲಿಸಿ 22 ವರ್ಷಗಳಾಗಿದೆ. ಅದರ ಉತ್ಪಾದನೆಗೆ ಅವಕಾಶ ನೀಡಬೇಕು. ನಮಗೆ ಸಾಕಷ್ಟು ಅನ್ಯಾಯವಾಗಿದ್ದು ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಹಿಂದುಳಿದ ವರ್ಗ ಎಂದರೆ ನೂರಾರು ಸಮಾಜದವರಿದ್ದಾರೆ. ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಧರ್ಮದಲ್ಲಿ ರಾಜಕಾರಣ ಇಲ್ಲ, ರಾಜಕಾರಣದಲ್ಲಿ ಧರ್ಮವಿದೆ: ಭಾರತದ ಸ್ವಾಮೀಜಿಗಳು ರಾಜಕಾರಣಕ್ಕೆ ಬಂದವರಲ್ಲ. ಆದರೆ, ನಮ್ಮ ಸಮಾಜಕ್ಕೆ ಅನ್ಯಾಯವಾದಾಗ ಮಾತನಾಡಬೇಕಾಗುತ್ತದೆ. ಧರ್ಮದಲ್ಲಿ ರಾಜಕಾರಣ ಇಲ್ಲ. ಆದರೆ, ರಾಜಕಾರಣದಲ್ಲಿ ಧರ್ಮವಿದೆ. ಕಳೆದ ವರ್ಷ ಸಿಎಂ ಆಯ್ಕೆ ಮಾಡುವಾಗ ಯಾವ್ಯಾವ ಸ್ವಾಮಿಜಿ ಎಲ್ಲೆಲ್ಲಿ ಒತ್ತಡ ಹಾಕಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಹಿಂದೆ ಧರ್ಮಗುರುಗಳು ರಾಜಗುರುಗಳಾಗದೇ ರಾಜರಿಗೆ ಅರಮನೆಯಲ್ಲಿ ಸಲಹೆ ಸೂಚನೆ ನೀಡುತ್ತಿದ್ದರು. ಆದರೆ, ಈಗ ನಾವು ಮಠಾಧೀಶರು ಹೊರಗೆ ಬಂದಿದ್ದು, ನಮ್ಮ ಸಮಾಜಕ್ಕೆ ಅನ್ಯಾಯವಾದಾಗ ನಾವು ಧ್ವನಿ ಎತ್ತಬೇಕಾಗುತ್ತದೆ. ನಾರಾಯಣಗುರು ಹೆಸರನ್ನು ನಾಯಕರು ಪ್ರತಿನಿತ್ಯ ನೆನೆಯುತ್ತಾರೆ. ಆದರೆ, ಅವರನ್ನು ಪ್ರತಿನಿಧಿಸುವ ಸಮಾಜ ಕಡೆಗಣನೆಯಾಗಿದೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಜನಪ್ರಿಯ ಮುಖ್ಯಮಂತ್ರಿಗಳು, ಸಿಎಂ ಸ್ಥಾನದ ಚರ್ಚೆ ಅಪ್ರಸ್ತುತ : ದಿನೇಶ್ ಗುಂಡೂರಾವ್ - Dinesh Gundu Rao