ಕೊಡಗು: ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಬಿಜೆಪಿ ಕಾರ್ಯಕರ್ತನ ಮೇಲೆ ಕಾರೊಂದು ಹರಿದಿದೆ. ಪರಿಣಾಮ ಸ್ಥಳದಲ್ಲೇ ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಕುಶಾಲ ನಗರ ತಾಲೂಕಿನ ವಾಲೂರು ತ್ಯಾಗತೂರು ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.
ಬಿಜೆಪಿ ಕಾರ್ಯಕರ್ತ ರಾಮಪ್ಪ ಎಂಬ ಸಾವನ್ನಪ್ಪಿರುವ ವ್ಯಕ್ತಿ. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಹಾಗೂ ಸ್ಥಳೀಯ ನೇತೃತ್ವದಲ್ಲಿ ಸೂಕ್ತ ನ್ಯಾಯ ಒಗಿಸುವಂತೆ ಇಂದು (ಶುಕ್ರವಾರ) ಪ್ರತಿಭಟನೆ ನಡೆಸಲಾಯಿತು.
ಗುರುವಾರ ಸಂಜೆ ಕುಶಾಲ ನಗರದ ವಾಲ್ಯೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ ಸಂದರ್ಭದಲ್ಲಿ ಸಿದ್ದಾಪುರದ ಕಡೆಯಿಂದ ಕಾರೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಸ್ಥಳದಲ್ಲೇ 60 ವರ್ಷದ ರಾಮಪ್ಪ ಮೃತಪಟ್ಟಿದ್ದರು. ರತಿಷ್ (35) ಹಾಗೂ ಚಂದ್ರರಾಜು (55) ಎಂಬುವವರು ಗಾಯಗೊಂಡಿದ್ದರು.
ಡಿಕ್ಕಿ ಹೊಡೆದ ಕಾರು ಚಾಲಕ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದನು. ಆ ಕಾರ್ನ್ನು ಬೆನ್ನತ್ತಿದ್ದ ಸ್ಥಳೀಯ ಯುವಕರು, ತಂಗಸಮುದ್ರದ ಬಳಿಯ ಚೆಕ್ ಪೋಸ್ಟ್ನಲ್ಲಿ ಹತ್ತಿರ ತಡೆದು ನಿಲ್ಲಿಸಿದರು. ಕಾರು ಚಾಲಕನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಕಾರ್ನಲ್ಲಿದ್ದ ಕೆಲವರು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಿದ್ದಾಪುರದಲ್ಲಿ ಪ್ರತಿಭಟನೆ: ಮತಯಾಚನೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಕಾರು ಡಿಕ್ಕಿ ಹೊಡೆದಿರುವ ಪ್ರಕರಣದಲ್ಲಿ ಸಾವನ್ನಪ್ಪಿದ್ದ ರಾಮಪ್ಪ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು. ಈ ಘಟನೆಗೆ ಸಂಬಂಧಿಸಿದಂತೆ ಸರಿಯಾದ ತನಿಖೆ ಮಾಡಬೇಕು ಎಂದು ಆಗ್ರಹಿಸಿ ಕೊಡಗಿನ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸ್ಥಳಕ್ಕೆ ಮೈಸೂರು- ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಒಡೆಯರ್ ಭಾಗವಹಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಮಾಡಿಕೊಂಡಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ. ಉನ್ನತ ಅಧಿಕಾರಿಗಳು ಸ್ಥಳದಲ್ಲೇ ಬಿಟ್ಟಿದ್ದಾರೆ.
ನಿಷೇಧಾಜ್ಞೆ ಜಾರಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಂ 144ರ ಅಡಿ ಕೊಡಗು ಜಿಲ್ಲೆಯ ಸಿದ್ದಾಪುರ ನಗರ, ವಾಲ್ನೂರು ಗ್ರಾಮ, ಅರೆಕಾಡು ಗ್ರಾಮ, ನೆಲ್ಲಿಹುದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಂಜಾಗೃತ ಕ್ರಮವಾಗಿ ಶುಕ್ರವಾರ (ಏ.19) ತಕ್ಷಣದಿಂದ ಜಾರಿಗೆ ಬರುವಂತೆ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪು ಸೇರತಕ್ಕದ್ದಲ್ಲ. ಪ್ರತಿಭಟನೆ, ಮೆರವಣಿಗೆ, ರ‍್ಯಾಲಿ, ಜಾಥಾ, ರಸ್ತೆ ತಡೆ, ಪ್ರಚೋದಾನಾತ್ಮಕ ಹೇಳಿಕೆ, ಘೋಷಣೆ ಕೂಗತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.