ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಪರ ದಿನೆ ದಿನೇ ವಾತಾವರಣ ತುಂಬಾ ಚೆನ್ನಾಗಿದೆ. 28 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬುದು ನಮ್ಮ ಅಪೇಕ್ಷೆ. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಬೇಕು. ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ನೋಡೋಣ, ಈ ಸಂಬಂಧ ನಮ್ಮ ಶಕ್ತಿ ಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಪ್ರಧಾನಿ ಮೋದಿ ಅವರು ನಾಳೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಮೈಸೂರು ಹಾಗೂ ಮಂಗಳೂರಿಗೆ ಅವರ ಭೇಟಿ ನಿಗದಿಯಾಗಿದೆ. ಮೈಸೂರಿನಲ್ಲಿ ನಾಳೆ ನಡೆಯಲಿರುವ ಸಮಾವೇಶದಲ್ಲಿ ನಾನು ಸಹ ಭಾಗವಹಿಸುತ್ತಿದ್ದೇನೆ. ಇವತ್ತು ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಹಿರಿಯೂರಲ್ಲಿ ಪ್ರಚಾರ ಇದೆ. ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.
ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ವಿರುದ್ಧ ಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಎಸ್ವೈ, ನೋಡೋಣ, ಅದು ಪಾರ್ಟಿಗೆ ಬಿಟ್ಟಿದ್ದು ಎಂದರು. ಮೋದಿಯವ ಭಾವಚಿತ್ರ ಹಿಡಿದು ಮತ ಕೇಳಿದ್ದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಒಳ್ಳೆಯದೇ ತಪ್ಪೇನಿಲ್ಲ, ಅದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಆರೋಪಿಗಳ ಬಂಧನ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಬಹಳ ಕಷ್ಟಪಟ್ಟು ಹಿಡಿದಿದ್ದಾರೆ. ಬಂಧನ ಮಾಡಿರುವುದು ಒಳ್ಳೆಯ ವಿಚಾರ. ಅವರಿಗೆ ತಕ್ಕ ಪಾಠ ಕಲಿಸಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಏ.14ರಂದು ರಾಜ್ಯದಲ್ಲಿ ಮೋದಿ ಮತ ಪ್ರಚಾರ: ಮೈಸೂರಲ್ಲಿ ಸಮಾವೇಶ, ಮಂಗಳೂರಲ್ಲಿ ರೋಡ್ ಶೋ - Modi Campaign
ಮೋದಿ ರಾಜ್ಯ ಭೇಟಿ ಮತ್ತು ರೋಡ್ ಶೋ ಕುರಿತು ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುನೀಲ್ ಕುಮಾರ್, ಏ.14ರಂದು ಸಂಜೆ 4 ಗಂಟೆಗೆ ಮೈಸೂರು ಮಹಾರಾಜ ಮೈದಾನದಲ್ಲಿ ಚಾಮರಾಜನಗರ, ಮಂಡ್ಯ ಕ್ಷೇತ್ರ ಸೇರಿಸಿ ಸಮಾವೇಶ ನಡೆಯಲಿದ್ದು ಮೋದಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದು ಬಿಜೆಪಿ, ಜೆಡಿಎಸ್ ಮುಖಂಡರನ್ನೊಳಗೊಂಡ ಸಮಾವೇಶವಾಗಿರಲಿದೆ ಎಂದಿದ್ದರು.
ಬಳಿಕ ಅಂದು ಸಂಜೆ ಮಂಗಳೂರಿನಲ್ಲಿ ರೋಡ್ ಶೋದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ನಾರಾಯಣ ಗುರು ವೃತ್ತದಿಂದ, ನವ ಭಾರತ ವೃತ್ತದವರೆಗೂ ರೋಡ್ ಶೋ ನಡೆಯಲಿದೆ. 1.5 ಕಿ.ಮೀ ರೋಡ್ ಶೋ ಇರಲಿದೆ ಎಂದು ವಿವರಿಸಿದ್ದರು.
ಏ.15ಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಬೆಂಗಳೂರಿಗೆ ಆಗಮಿಸಲಿದ್ದು, ಮೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಧ್ಯಮದವರ ಜೊತೆ ಸಂವಾದ, ಸಂಜೆ 4 ಗಂಟೆಗೆ ರಾಜ್ಯದ ಬೇರೆ ಬೇರೆ ಗಣ್ಯರೊಂದಿಗೆ ವಿಶೇಷ ಸಭೆ ಹಾಗೂ ಬಳಿಕ ಸಂಜೆ 7ಕ್ಕೆ ಪ್ರಬುದ್ಧರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು.