ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೋಸ್ಟರ್ ವಾರ್ ಜೋರಾಗಿದೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಮಾಹಿತಿಯನ್ನು ಒಳಗೊಂಡಿರುವ 'ಕಾಂಗ್ರೆಸ್ ಡೇಂಜರ್' ಎನ್ನುವ ಕ್ಯೂಆರ್ ಕೋಡ್ ಹೊಂದಿರುವ ಪೋಸ್ಟರ್ ಅನ್ನು ಇಂದು ಬಿಜೆಪಿ ಬಿಡುಗಡೆ ಮಾಡಿತು. 'ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕಾಂಗ್ರೆಸ್‌ನ ವೈಫಲ್ಯ ನೋಡಿ' ಎನ್ನುವ ಮೂಲಕ ಕಾಂಗ್ರೆಸ್‌ನ ಚೊಂಬು ಜಾಹೀರಾತಿಗೆ ಕೌಂಟರ್ ನೀಡಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಶಾಸಕರಾದ ಡಾ.ಅಶ್ವಥ್ ನಾರಾಯಣ, ಸುರೇಶ್ ಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿದರು.
ಶಾಸಕ ಸುರೇಶ್ ಕುಮಾರ್ ಮಾತನಾಡಿ, ಇಂದು ಪ್ರಚಾರಕ್ಕೆ ಕೊನೆಯ ದಿನ. ಮತದಾನ ಮಾಡಲು ಹೋಗುವ ಮೊದಲು ಕಾಂಗ್ರೆಸ್ ಪ್ರಣಾಳಿಕೆಯನ್ನು ಒಮ್ಮೆ ಗಮನಿಸಿ. ಅದರ ಜೊತೆಗೆ ಇಂಡಿ ಒಕ್ಕೂಟದ ಬಗ್ಗೆಯೂ ಗಮನಿಸಿ ಎಂದು ಮತದಾರರಿಗೆ ಹೇಳಿದರು.
ಜನಸಂಖ್ಯೆ ಆಧಾರದ ಮೇಲೆ ಸಂಪತ್ತನ್ನು ವಿತರಣೆ ಮಾಡುತ್ತೇವೆ. ಕಷ್ಟಪಟ್ಟು ದುಡಿಯುವವರ ಹಣವನ್ನು ಏನೂ ಕಷ್ಟಪಡದವರಿಗೆ ಹಂಚುತ್ತೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಇದು ಕಾಂಗ್ರೆಸ್ ಬೆಂಬಲಿತ ಮಾವೋವಾದಿಗಳ ಚಿಂತನೆ. ಕೈಗಾರಿಕೆ ತೆರೆಯುತ್ತೇವೆ, ಕೆಲಸ ಕೊಡುತ್ತೇವೆ ಎನ್ನುವ ಬದಲಾಗಿ ಸಂಪತ್ತನ್ನು ಕಿತ್ತು ಹಂಚುತ್ತೇವೆ ಎನ್ನುತ್ತಾರೆ. ಒಟ್ಟಾರೆ ಇಂಡಿಯಾ ಅಲೆಯನ್ಸ್ ಮತ್ತು ಕಾಂಗ್ರೆಸ್ ಪಕ್ಷ ಭಾರತವನ್ನು ಯಾವ ಗತಿಗೆ ತರಬಹುದು ಎಂಬುದರ ಮುನ್ಸೂಚನೆ ಇದು ಎಂದು ವಾಗ್ದಾಳಿ ನಡೆಸಿದರು.
ಯುಪಿಎ ಅವಧಿಯಲ್ಲಿ ಭ್ರಷ್ಟಾಚಾರ ಮಾಡಿ ಹಣ ಲೂಟಿ ಮಾಡಿದ್ದು ಸಾಲದು ಎಂದು ಪ್ರತಿಯೊಬ್ಬ ನಾಗರಿಕನ ಆಸ್ತಿಗೆ ಕೈಹಾಕಲು ಮುಂದಾಗುವ ಮಾತನ್ನು ಕಾಂಗ್ರೆಸ್‌ನ ಸ್ಯಾಮ್ ಪಿತ್ರೋಡಾ ಆಡಿದ್ದಾರೆ. ರಾಹುಲ್ ಗಾಂಧಿ ಇಂಡಿಯಾ ಅಲೆಯನ್ಸ್ ಅಧಿಕಾರಕ್ಕೆ ಬಂದರೆ ಭಾರತದ ಅಣ್ವಸ್ತ್ರವನ್ನೇ ನಾಶ ಮಾಡುತ್ತೇವೆ ಎನ್ನುತ್ತಾರೆ. ಇತ್ತ ಡಿಎಂಕೆ ಸನಾತನ ಹಿಂದೂ ಧರ್ಮವನ್ನೇ ನಿರ್ನಾಮ ಮಾಡ್ತೀವಿ ಎನ್ನುತ್ತದೆ. ಇಂತಹ ಕಾಂಗ್ರೆಸ್‌ಗೆ ಮತ ಹಾಕಿದರೆ ದೇಶಕ್ಕೆ ಹಾನಿಕಾರಕ ಎಂದರು.
ಡಾ.ಅಶ್ವತ್ಥ್ ನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಕಾಲೇಜಿಗೆ ಹೆಣ್ಣು ಮಕ್ಕಳು ಹೋಗಬೇಕಾ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮೇಶ್ವರಂ ಕೆಫೆ ಬ್ಲಾಸ್ಟ್, ಕುಕ್ಕರ್ ಬ್ಲಾಸ್ಟ್ ಆಗಿದ್ದು, ಅವರನ್ನು ಬ್ರದರ್ಸ್ ಅಂದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಲು ಕಾರಣವಾದ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು. ಈ ಕಾಂಗ್ರೆಸ್ ಪಕ್ಷ ಯಾವಾಗಲೂ ಡೇಂಜರ್ ಅಂತ ತಿಳಿಯಬೇಕು ಎಂದು ಹೇಳಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನವು ಭಗವದ್ಗೀತೆ ಬೈಬಲ್, ಕುರಾನ್‌ಗಿಂತ ಶ್ರೇಷ್ಠವಾದದ್ದು. ಅದನ್ನು ಮತ್ತೆ ಅಂಬೇಡ್ಕರ್ ಅವರೇ ಬಂದರೂ ತೆಗೆಯಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ. ಅಂಬೇಡ್ಕರ್ ಕೂಡ ಆರ್ಟಿಕಲ್ 370ಗೆ ವಿರೋಧ ಮಾಡಿದ್ದರು. ಬಿಜೆಪಿ ಮತ್ತು ಅಂಬೇಡ್ಕರ್ ಅವರ ಚಿಂತನೆ ಒಂದೇ ಆಗಿದೆ. ಬಿಜೆಪಿ ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದೆ. ಎಲ್ಲಾದರೂ ಸಂವಿಧಾನ ಬದಲಿಸಿತಾ, ದುರುಪಯೋಗ ಆದ್ರೂ ಮಾಡಿಕೊಂಡಿದೆಯಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಚುನಾವಣೆ ಬಳಿಕ ಗುರು ರಾಘವೇಂದ್ರ ಬ್ಯಾಂಕ್ ಹಗರಣ ತನಿಖೆಗೆ ಎಸ್ಐಟಿ ರಚನೆ ಬಗ್ಗೆ ನಿರ್ಧಾರ: ಡಿಸಿಎಂ