ಬೆಂಗಳೂರು: ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಿಗೆ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದರೆ, ಮತ್ತೊಂದೆಡೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರರು ಗುರುವಾರ ಪ್ರತ್ಯೇಕ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಮಾಜಿ ಶಾಸಕ ಕುಮಾರ ಬಂಗಾರಪ್ಪ ನಿವಾಸದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಭೆ ನಡೆಸಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆ ಬಳಿಕ ರಮೇಶ್ ಜಾರಕಿಹೊಳಿ ಹಾಗೂ ಯತ್ನಾಳ್ ಮಾತನಾಡಿ, ''ಪಾದಯಾತ್ರೆ ವಿಚಾರವೂ ಸೇರಿದಂತೆ ಇತರ ಹಲವು ವಿಚಾರಗಳ ಚರ್ಚೆ ನಡೆದಿದೆ. ಪಾದಯಾತ್ರೆಗೆ ದೆಹಲಿ ವರಿಷ್ಠರ ಅನುಮತಿ ಕೇಳಲಾಗಿದೆ. ಅವರು ಓಕೆ ಅಂದರೆ ಬಳ್ಳಾರಿ ಪಾದಯಾತ್ರೆ ಮಾಡುತ್ತೇವೆ'' ಎಂದರು.
''ಮುಖಂಡರು ಹೇಳಿರುವುದಷ್ಟೇ. ನಾವು ಬಿಜೆಪಿಯ ನಿಷ್ಠಾವಂತರು. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ'' ಎಂದು ಮಾಜಿ ಶಾಸಕ ಕುಮಾರ ಬಂಗಾರಪ್ಪ ಹೇಳಿದರು.
ಒಂದು ಬಣ ಮುಡಾ ಹಗರಣದ ವಿರುದ್ಧ ಮೈಸೂರಿಗೆ ಪಾದಯಾತ್ರೆ ಮಾಡಿದರೆ, ಯತ್ನಾಳ್ ಮತ್ತಿತರ ನಾಯಕರು ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದ ವಿರುದ್ಧ ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದಂತಿದೆ.
ಬಿಜೆಪಿ ಒಳಬೇಗುದಿ: ಮೂಲಗಳ ಪ್ರಕಾರ, ಬಿ.ವೈ.ವಿಜಯೇಂದ್ರ ವಿರುದ್ಧ ಏಕಾಏಕಿ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ. ಇದರಿಂದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸಾಬೀತಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್ ಹಿಂದಿನಿಂದಲೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಮೇಲೆ ಸಮರ ಸಾರಿರುವುದು ಗೊತ್ತಿರುವ ವಿಚಾರ. ಆದರೆ, ರಮೇಶ್ ಜಾರಕಿಹೊಳಿ ಇದ್ದಕ್ಕಿದ್ದಂತೆ ವಿಜಯೇಂದ್ರ ಮೇಲೆ ಸಿಟ್ಟಾಗಲು ಕಾರಣವೇನೆಂಬುದು ನಿಗೂಢ. ಇದೆಲ್ಲದರ ನಡುವೆ ನಾಯಕರ ಇವತ್ತಿನ ಸಭೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಬಿಜೆಪಿ ಪಾದಯಾತ್ರೆಯಿಂದ ಹಿಂದೆ ಸರಿದ ಜೆಡಿಎಸ್: ಪ್ರೀತಂ ಗೌಡ ವಿಷಯದಲ್ಲಿ ಹೆಚ್‌ಡಿಕೆ ಆಕ್ರೋಶ - H D Kumaraswamy