ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಕುರಿತ ಚರ್ಚೆ ವೇಳೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಆಡಳಿತ ಪಕ್ಷಕ್ಕೆ ಮಾತ್ರವಲ್ಲದೆ ಸ್ವಪಕ್ಷೀಯರಿಗೂ ಮಾತಿನ ಮೂಲಕ ತಿವಿದರು.
ಚರ್ಚೆ ವೇಳೆ ಮಾತನಾಡುತ್ತಾ, ಇಂದು ಏನೆಲ್ಲಾ ಹಗರಣ ಆಗಿದೆ. ನಾವು ಒಂದು ನಿಗಮದ ಬಗ್ಗೆ ಚರ್ಚೆ ಮಾಡುವುದು ಬೇಡ. ಐದು ವರ್ಷ ಪೂರೈಸಿದ ಸಿಎಂಗಳ ಆಡಳಿತದಲ್ಲಿ ಈ ತರ ಆರೋಪ ಬಂದಿಲ್ಲ. ನಮ್ಮ ಅವಧಿಯಲ್ಲಿ ನಾವು ತಪ್ಪು ಮಾಡಿದ್ದೇವೆ. ನಿಮಗೆ 136 ಸ್ಥಾನ ಕೊಟ್ಟಿದ್ದಾರೆ. ನೀವು ಏಕೆ ತನಿಖೆ ಮಾಡಿಲ್ಲ. ನೀವು ಬರೇ ಸಿಎಂ ಆಗಿದ್ದೀರಿ. ನಿಮಗೆ ಕಳಕಳಿ ಇದ್ದರೆ ಆ ಮಂತ್ರಿಯನ್ನು, ನಿಗಮದ ಅಧ್ಯಕ್ಷರನ್ನು ವಜಾ ಮಾಡಬೇಕಿತ್ತು. ಭ್ರಷ್ಟರನ್ನು ರಕ್ಷಣೆ ಮಾಡಲು ಕೆಲ ಅಧಿಕಾರಿಗಳಿದ್ದಾರೆ. ಈ ವರ್ಗಾವಣೆ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಏಕೆ ಗೊತ್ತಾಗಿಲ್ಲ?. ಇತಿಹಾಸದಲ್ಲಿ ಉಳಿಯುವ ಕೆಲಸ ಮಾಡಿ ಎಂದು ಒತ್ತಾಯಿಸಿದರು.
ಹುಬ್ಬಳ್ಳಿಯಲ್ಲಿ ಅವತ್ತು ನೀವು ಅಹಿಂದ ಸಮಾವೇಶ ಮಾಡಿದ್ದಿರಿ. ಅದಕ್ಕೆ ಬಸವರಾಜ ಬೊಮ್ಮಾಯಿ, ನಾನು ಬೆಂಬಲ ವ್ಯಕ್ತಪಡಿಸಿದ್ದೆವು. ಸಿದ್ದರಾಮಯ್ಯರನ್ನು ಹೇಗೆ ಕೆಳಗಿಳಿಸಬೇಕು ಎಂಬುದು ಅಲ್ಲಿಂದಲೇ ಮಸಲತ್ತು ನಡೆತಾ ಇದೆ. ಮುಡಾ ಹಗರಣ ಬಂತು. ಅದು ಕೂಡ ಅಲ್ಲಿಂದಲೇ ಬಂತು ಎಂದು ಕಾಲೆಳೆದರು.
ನಾಗೇಂದ್ರರ ವಿರುದ್ಧ ಕ್ರಮ ಕೈಗೊಂಡರೆ ಆತ ಬಾಯಿ ಬಿಟ್ಟರೆ ದಿಲ್ಲಿಯಲ್ಲಿನ ನಾಯಕರು ಜೈಲಿಗೆ ಹೋಗ್ತಾರೆ ಎಂಬ ಭಯದಿಂದ ಕ್ರಮ ಕೈಗೊಂಡಿಲ್ಲ. ನೀವು ಹೌದು ಹುಲಿಯಾ ಎಂದು ಅನ್ನಿಸಿಕೊಳ್ಳಬೇಕು. ಲೋಕಸಭೆ ಚುನಾವಣೆಯ ಬಳಿಕ ನಿಮ್ಮನ್ನು ಮನೆಗೆ ಕಳುಹಿಸುವ ಸಂಚು ರೂಪಿಸಲಾಗುತ್ತಿದೆ. ನೀವು ಸ್ಟ್ರಾಂಗ್ ಆಗಬೇಕು. ನೀವು ಕೊನೆಯ ದಿನಗಳಲ್ಲಿ ಇದ್ದೀರಿ. ನೀವು ನಿವೃತ್ತಿ ಆಗುತ್ತಿದ್ದೀರಿ. ನಿಮ್ಮನ್ನು ರಾಜ್ಯಪಾಲರನ್ನಾಗಿ ಮಾಡುವುದಿಲ್ಲ. ಏಕೆಂದರೆ ಮುಂದೆ 15-20 ವರ್ಷ ಮೋದಿನೇ ಪ್ರಧಾನಿ ಆಗಿರಲಿದ್ದಾರೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಬಗ್ಗೆ ಮಾಧ್ಯಮದವರು ಚುಚ್ಚಿಲ್ಲ ಎಂದರೆ ಈ ಗಿರಾಕಿಗಳು ಏಳುತ್ತಿರಲಿಲ್ಲ ಎಂದು ಸ್ವಪಕ್ಷೀಯರಿಗೆ ಬಸನಗೌಡ ಯತ್ನಾಳ್ ಚುಚ್ಚಿದರು. ಬಿಜೆಪಿಯಿಂದ ಉಗ್ರ ಪ್ರತಿಭಟನೆ, ಸರ್ಕಾರ ಗಡಗಡನೂ ಇಲ್ಲ ಬಡಬಡನೂ ಇಲ್ಲ. ಪ್ರತಿಭಟನೆ ನಂತರ ಅಶೋಕ್ ಸಿಎಂಗೆ ಕರೆ ಮಾಡ್ತಾರೆ. ತಪ್ಪು ತಿಳ್ಕೋಬೇಡಿ ಸರ್, ಮೇಲಿನವರ ಒತ್ತಡ ಇತ್ತು ಅಂತಾರೆ ಎಂದು ಮೂದಲಿಸಿದರು.
ಅಹೋರಾತ್ರಿ ಧರಣಿ ಮಾಡಲು ಮುಂದಾಗಿದ್ದಾರೆ ನಮ್ಮವರು. ಅಹೋರಾತ್ರಿ ಧರಣಿ ನಾಟಕ ಮಾಡುವುದು. ಆಗ ಸ್ಪೀಕರ್ ಬರ್ತಾರೆ, ಹೋಂ ಮಿನಿಸ್ಟ್ರು ಬರ್ತಾರೆ, ಊಟ ಬರುತ್ತೆ, ಅಲ್ಲಿಗೆ ಮುಗೀತು. ಅಶೋಕ್ ನೇತೃತ್ವದಲ್ಲಿ ದಲಿತ ಸಮುದಾಯದ ಹಿತ ಕಾಪಾಡಿದ್ದೇವೆ ಅಂತ ನಾವು ಹೊರಗೆ ಮಾತಾಡಬೇಕು ಎಂದು ಟೀಕಿಸಿದರು.
ಯಾರಿಗೂ ಅಪ್ಪಾಜಿ ಅನ್ನಬಾರದು: ನಿನ್ನೆ ಅಶೋಕ್ ಮಾತಾಡಿದ್ದು ನೋಡಿದ್ರೆ ಅಶೋಕ್ಗೆ ಇಷ್ಟೊಂದು ಜ್ಞಾನ ಇದೆಯಾ ಅನಿಸುತ್ತೆ. ಇಷ್ಟು ದಿನ ಅಶೋಕ್ ಯಾಕೆ ಮಾತಾಡ್ಲಿಲ್ಲ?. ಅಶೋಕ್ ಈಗ ಸ್ವಾಭಿಮಾನದ ರಾಜಕಾರಣ ಮಾಡಬೇಕು ಅಂತ ನಿರ್ಧರಿಸಿರಬೇಕು. ಯಾವ ಅಪ್ಪ ಮಕ್ಕಳಿಗೂ ಯಾರೂ ಅಂಜಬಾರದು, ಯಾರಿಗೂ ಅಪ್ಪಾಜಿ ಅನ್ನಬಾರದು, ನಮ್ಮ ಅಪ್ಪನಿಗೆ ಮಾತ್ರ ಅಪ್ಪ ಅನ್ನಬೇಕು. ಈ ಅಪ್ಪಾಜಿ ಸಂಸ್ಕೃತಿ ನಮ್ಮ ರಾಜ್ಯದಿಂದ ಹೋಗಬೇಕು. ಅಪ್ಪಾಜಿ ಅಂತ ಅವರ ಕಾಲು ಮುಟ್ತಾರೆ ಎಂದು ಲೇವಡಿ ಮಾಡಿದರು.
ಈ ಅಪ್ಪಾಜಿ ಇದ್ದಾರಲ್ಲ ಅವರನ್ನು ಮುಟ್ಟೋದಕ್ಕೂ ಹೇಸಿಗೆ ಆಗುತ್ತೆ. ಈ ವೇಳೆ ಅಪ್ಪಾಜಿ ಅಂದ್ರೆ ಯಾರು ಹೇಳಿ ಅಂತ ಕಾಂಗ್ರೆಸ್ ಸದಸ್ಯರಿಗೆ ಟಾಂಗ್ ನೀಡಿದರು. ಯಾರು ಅಪ್ಪಾಜಿ ಅಂತ ಎಲ್ಲರಿಗೂ ಗೊತ್ತಿದೆ ಅಂತ ಕೌಂಟರ್ ಕೊಟ್ಟರು.
ಇದನ್ನೂ ಓದಿ : ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಯೋಜನೆ ಶೀಘ್ರದಲ್ಲಿ ಅನುಷ್ಠಾನ: ಸಚಿವ ಬೋಸರಾಜು - WATER TREATMENT PLANT