ದಾವಣಗೆರೆ: ಇಲ್ಲಿನ ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಸಂಸದ ಜಿಎಂ ಸಿದ್ದೇಶ್ವರ್ ಅವರ ಪತ್ನಿಗೆ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ನಾಯಕರು ಎಂದು ಸಭೆ ನಡೆಸಿದ್ದಾರೆ. ಮಹಾನಗರ ಪಾಲಿಕೆ ಮಾಜಿ ಮೇಯರ್ ಬಿ.ಜೆ. ಅಜಯಕುಮಾರ್ ನಿವಾಸದಲ್ಲಿ ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಅಭ್ಯರ್ಥಿ ಬದಲಾವಣೆಗೆ ಸಭೆ ನಡೆಸಲಾಯಿತು. 3 ದಿನಗಳ ಒಳಗೆ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು. ಅರ್ಹರಿಗೆ ಟಿಕೆಟ್ ನೀಡಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ನಾಳೆ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ನಾವು ಯಾರು ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ದುಗ್ಗಮ್ಮ ಜಾತ್ರೆ ಬಳಿಕ ಮತ್ತೊಮ್ಮೆ ಸಭೆ ಸೇರಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಿದ್ದೇಶ್ವರ್ ಅವರ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕೆಲಸ ಮಾಡಲು ತೀರ್ಮಾನ ಮಾಡಲಾಗಿದೆ. ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುವುದು ನಮ್ಮ ಗುರಿ. ಸಿದ್ದೇಶ್ವರ್ ಕುಟುಂಬದವರು ಅಭ್ಯರ್ಥಿಯಾದರೆ ಸೋಲು ಕಟ್ಟಿಟ್ಟ ಬುತ್ತಿಯಾಗಲಿದೆ. ದಾವಣಗೆರೆಯಲ್ಲಿ ಪಕ್ಷ ಸೋಲಬಾರದೆಂದರೆ, ಬೇರೆಯವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ನಾವು ಯಡಿಯೂರಪ್ಪನವರು ಸೇರಿದಂತೆ ಯಾರ ಬಳಿಯೂ ಹೋಗಲ್ಲ, ದುಗ್ಗಮ್ಮನ ಜಾತ್ರೆ ಬಳಿಕ ಅಭ್ಯರ್ಥಿ ಬದಲಾವಣೆಯಾಗಬೇಕು. ಇಲ್ಲದಿದ್ದರೆ ಮುಂದಿನ ತೀರ್ಮಾನ ಮಾಡುತ್ತೇವೆ. ವಿಧಾನಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಸೋಲಿಸಿದ ಮನುಷ್ಯ ಜಿ ಎಂ ಸಿದ್ದೇಶ್ವರ್. ಹೀಗಾಗಿ ನಾವ್ಯಾರು ಸಿದ್ದೇಶ್ವರ್ಗೆ ಬೆಂಬಲ ಕೊಡುವ ಪ್ರಶ್ನೆ ಇಲ್ಲ, ಇಷ್ಟು ದಿನ ಅವರಿಗೆ ಗೌರವ ಕೊಟ್ಟಿದ್ದೇವೆ. ಮತ್ತೆ ಗೌರವ ಕೊಡೋ ಪ್ರಶ್ನೆಯೇ ಇಲ್ಲ ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಪ್ರತಿಕ್ರಿಯಿಸಿ, ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆ ಮತ್ತು ಕನಸು. ದಾವಣಗೆರೆ ಲೋಕಸಭಾ ಅಭ್ಯರ್ಥಿ ಬದಲಾವಣೆ ಆಗಬೇಕು ಎಂದು ರವೀಂದ್ರನಾಥ್ ನೇತೃತ್ವದಲ್ಲಿ ಒಮ್ಮತದ ನಿರ್ಧಾರ ಮಾಡಿದ್ದೇವೆ. ಸಿದ್ದೇಶ್ವರ್ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಹರಪನಹಳ್ಳಿ ಮಾಜಿ ಶಾಸಕ ಕರುಣಾಕರ ರೆಡ್ಡಿ ಮಾತನಾಡಿ, ನನ್ನ ಚುನಾವಣೆಯಲ್ಲಿ ಸಂಸದ ಜಿ ಎಂ ಸಿದ್ದೇಶ್ವರ ಏನು ಮಾಡಿದ್ದಾರೆ ಎಂಬುದು ಭಗವಂತನಿಗೆ, ನಮ್ಮ ಕಾರ್ಯಕರ್ತರಿಗೆ ಗೊತ್ತು. ಏನೇ ಆಗಲಿ ಸಂಸದ ಜಿ ಎಂ ಸಿದ್ದೇಶ್ವರ ಪತ್ನಿಗೆ ನೀಡಿದ ಟಿಕೆಟ್ ವಾಪಸ್ ಪಡೆಯಬೇಕು. ನಿನ್ನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಗೋ ಬ್ಯಾಕ್ ಸಿದ್ದೇಶ್ವರ್ ಎಂದಿದ್ದಾರೆ. ನಾನು ಹರಪನಹಳ್ಳಿಯಲ್ಲಿ 20 ವರ್ಷಗಳಿಂದ ರಾಜಕೀಯ ಮಾಡುತ್ತಿರುವೆ. ಒಮ್ಮೆಯೂ ಸಹ ಪೊಲೀಸರನ್ನ ಕರೆಸಿಲ್ಲ, ನಿನ್ನೆ ನೂರಾರು ಪೊಲೀಸರನ್ನು ಕರೆಯಿಸಿ ಸಭೆ ಮಾಡಿದ್ದಾರೆ. ಅವರ ಕುಟುಂಬಕ್ಕೆ ಟಿಕೆಟ್ ಕೊಡಬಾರದಿತ್ತು, ಕೊಟ್ಟಿದ್ದಾರೆ. ಅದನ್ನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ವಿಜಯಪುರದಲ್ಲೂ ಬಿಜೆಪಿಗೆ ಬಂಡಾಯದ ಬಿಸಿ; ಅಖಾಡಕ್ಕಿಳಿಯಲು ಸಜ್ಜಾದ ಡಾ ಬಾಬು ರಾಜೇಂದ್ರ ನಾಯಕ್