ಬೆಂಗಳೂರು: ರಾಜ್ಯ ಬಿಜೆಪಿಯ ಭಿನ್ನ ನಾಯಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರವಾಲ್ ಅವರಿಗೆ ಬಿಜೆಪಿ ನಿಷ್ಠ ಬಣದ ಮುಖಂಡರು ಮನವಿ ಮಾಡಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರನ್ನು ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾಜಿ ಶಾಸಕರಾದ ವೈ.ಸಂಪಂಗಿ, ಜಗಳೂರು ರಾಮಚಂದ್ರ, ಎಂ.ಡಿ ಲಕ್ಷ್ಮಿನಾರಾಯಣ ಸೇರಿದಂತೆ ಹಲವು ಮುಖಂಡರು ಭೇಟಿ ಮಾಡಿದರು. ಈ ವೇಳೆ ರಾಜ್ಯ ಬಿಜೆಪಿಯ ನಾಯಕತ್ವದ ವಿರುದ್ಧ ಹೇಳಿಕೆ ನೀಡುತ್ತಿರುವ ಬಿಜೆಪಿಯ ಭಿನ್ನ ನಾಯಕ ಬಸನಗೌಡ ಪಾಟೀಲ ಯತ್ನಾಳ್ ತಂಡಕ್ಕೆ ಅಂಕುಶ ಹಾಕಿ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಸಂಘಟನೆ ಬಲಪಡಿಸಲಾಗುತ್ತಿದೆ. ಕೆಲವು ಮುಖಂಡರು ಅನಗತ್ಯವಾಗಿ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿದ್ದಾರೆ.
ರಾಧಾ ಮೋಹನ್‌ದಾಸ್ ಅಗರ್‌ವಾಲ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‌ದಾಸ್ ಅವರಿಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸದ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಕೆಲವು ಭಿನ್ನರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿರುವುದನ್ನೂ ಅವರ ಗಮನಕ್ಕೆ ತಂದಿದ್ದೇವೆ ಎಂದರು.
ಪಕ್ಷ ನಿಷ್ಠ ಮುಖಂಡರು ಸದ್ಯದಲ್ಲೇ ದೆಹಲಿಗೆ ತೆರಳಿ ರಾಜ್ಯ ಬಿಜೆಪಿಯ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರುತ್ತೇವೆ. ದೆಹಲಿಗೆ ಹೋಗುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮುಂದೆ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಅವರು ಹೇಳಿದರು.
ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸ ನಡೆದಿದೆ. ಮುಂದಿನ ಚುನಾವಣೆವರೆಗೂ ಅವರನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮುಂದುವರೆಸಬೇಕು. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಬೇಕು ಎಂಬುದನ್ನೂ ರಾಧಾಮೋಹನ್‌ದಾಸ್ ಅವರ ಗಮನಕ್ಕೆ ತಂದಿದ್ದೇವೆ. ಹಾಗೆಯೇ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಭೆ, ಸಮಾವೇಶ ನಡೆಸುವ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ತಿಳಿಸಿದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಎಲ್ಲವನ್ನೂ ಚರ್ಚಿಸಿದ್ದೇವೆ. ಕೆಲವು ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಭಿನ್ನರ ಜತೆ ಕೆಲವೇ ನಾಯಕರು ಮಾತ್ರ ಇದ್ದಾರೆ. ಉಳಿದಂತೆ ಎಲ್ಲರೂ ವಿಜಯೇಂದ್ರ ಅವರ ಬೆಂಬಲಕ್ಕೆ ಇರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ಇದನ್ನೂ ಓದಿ : ನಾನು ಸದ್ಯಕ್ಕೆ ಸೈಲೆಂಟ್, ಇನ್ಮುಂದೆ ರಮೇಶ್ ಜಾರಕಿಹೊಳಿ ವೈಲೆಂಟ್: ಬಸನಗೌಡ ಯತ್ನಾಳ್ ಹೊಸ ಬಾಂಬ್