ರಾಮನಗರ : ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಸ್ಪರ್ಧೆಯ ಕುರಿತಂತೆ ಮೈತ್ರಿ ಪಕ್ಷದ ಉಭಯ ನಾಯಕರಿಂದ ದ್ವಂದ್ವ ಹೇಳಿಕೆ ವ್ಯಕ್ತವಾಗಿದೆ. ಹೀಗಾಗಿ ರಾಜ್ಯದಲ್ಲಿ ಎನ್ಡಿಎ ಮೈತ್ರಿ ಇರಲಿ, ಇದೊಂದು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸಿ.ಪಿ ಯೋಗೇಶ್ವರ್ ಹಾಗೂ ಜೆಡಿಎಸ್ ಪಕ್ಷದಿಂದ ಯಾರೇ ಅಭ್ಯರ್ಥಿ ನಿಲ್ಲಿಸಿ ಫ್ರೆಂಡ್ಲಿ ಫೈಟ್ ಎದುರಿಸೋಣ ಎಂದು ಬಿಜೆಪಿ ಅಧ್ಯಕ್ಷರಾದ ಎಂ. ಎನ್ ಆನಂದಸ್ವಾಮಿ ಹೇಳುವ ಮೂಲಕ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪಚುನಾವಣೆ ಕುರಿತು ಕುತೂಹಲ ಮೂಡಿಸಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಒಕ್ಕೊರಲಿನಿಂದ ಬಿಜೆಪಿ ಪಕ್ಷದಿಂದ ಸಿ ಪಿ ಯೋಗೇಶ್ವರ್ ಸ್ಪರ್ಧಿಸಬೇಕು, ಬಿಜೆಪಿ ಹೈಕಮಾಂಡ್ಗೆ ಕೂಡ ಇದೇ ವಿಷಯವನ್ನ ನಾವೆಲ್ಲರೂ ತಿಳಿಸುತ್ತೇವೆ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಸದ್ಯದಲ್ಲೇ ನಡೆಯಲಿದೆ. ಈ ನಡುವೆ ಟಿಕೆಟ್ ಹಂಚಿಕೆ ವಿಷಯವಾಗಿ ಮೈತ್ರಿ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ. ಉಪಚುನಾವಣೆ ಘೋಷಣೆಗೂ ಮುನ್ನವೇ ಮೈತ್ರಿಯಲ್ಲಿ ಬಿರುಕು ಆಗಿದ್ದು, ಮೈತ್ರಿ ಟಿಕೆಟ್ಗಾಗಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಫೈಟ್ ಶುರುವಾಗಿದೆ. ಅತ್ತ ತನ್ನ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ತಾಲೂಕು ಜೆಡಿಎಸ್ ಪಟ್ಟು ಹಿಡಿದಿದ್ದರೆ, ಇತ್ತ ಬಿಜೆಪಿಗೆ ಮೈತ್ರಿ ಟಿಕೆಟ್ ನೀಡುವಂತೆ ಬಿಜೆಪಿ ಮುಖಂಡರು ಒತ್ತಾಯಿಸುತ್ತಿದ್ದಾರೆ.
ಮಾಜಿ ಸಚಿವ ಸಿ. ಪಿ ಯೋಗೇಶ್ವರ್ ಅವರನ್ನೇ ಮೈತ್ರಿ ಅಭ್ಯರ್ಥಿ ಮಾಡಬೇಕೆಂದು ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ನಾಯಕರು ತಮ್ಮ ತಮ್ಮ ನಾಯಕರ ಪರ ಬ್ಯಾಟಿಂಗ್ ನಡೆಸಿದರು. ಇತ್ತೀಚಿಗಷ್ಟೆ ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ಸುದ್ದಿಗೋಷ್ಠಿ ನಡೆಸಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ ಎಂದಿದ್ದರು. ಜಯಮುತ್ತು ಹೇಳಿಕೆಗೆ ಬಿಜೆಪಿ ಮುಖಂಡರಿಂದ ಆಕ್ಷೇಪ ವ್ಯಕ್ತವಾಗಿದ್ದು, ಹೈಕಮಾಂಡ್ ತೀರ್ಮಾನ ಮಾಡುವ ಮುನ್ನವೇ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೀಗೆ ಗೊಂದಲ ಸೃಷ್ಟಿ ಮಾಡಿದ್ರೆ ಫ್ರೆಂಡ್ಲಿ ಫೈಟ್ಗೆ ನಾವು ರೆಡಿ ಇದ್ದೇವೆ. ರಾಜ್ಯದಲ್ಲಿ ಮೈತ್ರಿ ಮುಂದುವರೆಯಲಿ, ಚನ್ನಪಟ್ಟಣದಲ್ಲಿ ಫ್ರೆಂಡ್ಲಿ ಫೈಟ್ ಮಾಡೋಣ ಬನ್ನಿ. ನಿಮ್ಮ ಪಕ್ಷದಿಂದ ನೀವು ಅಭ್ಯರ್ಥಿ ಹಾಕಿ, ನಮ್ಮ ಪಕ್ಷದಿಂದ ನಾವು ಅಭ್ಯರ್ಥಿ ಹಾಕ್ತೇವೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಸವಾಲ್ ಹಾಕಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ಸ್ಥಳೀಯ ಮುಖಂಡರಿಗೆ ಎಚ್ಚರಿಕೆ ಕೂಡಾ ಕೊಟ್ಟಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಬೇಕು: ಜೆಡಿಎಸ್ ತಾಲೂಕು ಅಧ್ಯಕ್ಷ - Channapatna by election