ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಬಂಧಿಸಿರುವ ರಾಷ್ಟ್ರೀಯ ತನಿಖಾ ತಂಡ (ಎನ್ಐಎ) ಈತನಿಗೆ ಸಹಕರಿಸಿದ ಆರೋಪದಡಿ ಇಬ್ಬರನ್ನು ಬಂಧಿಸಿದೆ. ಬಂಧಿತ ಮೂವರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ.
ಸಕಲೇಶಪುರದ ಆನೆಮಹಲ್ ಬಳಿ ಸುಳ್ಯ ತಾಲೂಕಿನ ಬೆಳಾರೆಯ ಮೊಹಮ್ಮದ್ ಮುಸ್ತಾಫ ಪೈಚಾರ್, ಸೋಮವಾರಪೇಟೆ ಮೂಲದ ಇಲಿಯಾಸ್ ಎಂಬುವರನ್ನು ಬಂಧಿಸಿದರೆ, ಆಶ್ರಯ ನೀಡಿದ ಆರೋಪದಡಿ ಸಿರಾಜ್ ಎಂಬುವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದಲ್ಲಿ ಮುಸ್ತಾಫ A4 ಆರೋಪಿಯಾಗಿದ್ದು, ಕೊಲೆಯಲ್ಲಿ ಪ್ರಮುಖ ಆರೋಪಿಯಾಗಿದ್ದನು. ಹಾಸನ ಜಿಲ್ಲೆಯ ಸಕಲೇಶಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಗಿದ್ದ ಆರೋಪಿಯನ್ನು ಎನ್ಐಎ ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದಲ್ಲಿ ಬಂಧಿಸಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮುಸ್ತಾಫನ ಬಗ್ಗೆ ಮಾಹಿತಿ ನೀಡಿದವರೆಗೆ 5 ಲಕ್ಷ ನಗದು ಬಹುಮಾನ ನೀಡುವುದಾಗಿ ಎನ್ಐಎ ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಹತ್ಯೆಯಾದ ಬಹುತೇಕ ಎರಡು ವರ್ಷದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಸಿಕ್ಕಿಬಿದ್ದಿದ್ದಾನೆ. ಸದ್ಯ ಮೂವರನ್ನು ಬೆಂಗಳೂರಿನ ಕಚೇರಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಒಟ್ಟು 20 ಮಂದಿ ಆರೋಪಿಗಳ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ಬಂಧಿತರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾನೂನು ಬಾಹಿರ ಚಟುವಟಿಕೆಯಲ್ಲಿ ಕ್ರಿಯಾಶೀಲವಾಗಿದ್ದರು. 2047ರ ವೇಳೆಗೆ ಇಸ್ಲಾಮಿಕ್ ರಾಷ್ಟ್ರ ನಿರ್ಮಿಸುವ ನಿಟ್ಟಿನಲ್ಲಿ ಪಿಎಫ್ಐ ಕಾರ್ಯಾಕರ್ತರು ಇಂತಹ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ವಿವಿಧ ಹಿಂದೂ ಮುಖಂಡರ ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದರು. ವ್ಯಕ್ತಿಯನ್ನ ಹತ್ಯೆ ಮಾಡಲು ಟಾರ್ಗೆಟ್ ಮಾಡುತ್ತಿದ್ದರು. ಅದಕ್ಕಾಗಿ ಸದಸ್ಯರಿಗೆ ತರಬೇತಿ ನೀಡುತ್ತಿದ್ದರು. ಟಾರ್ಗೆಟ್ ಆದ ವ್ಯಕ್ತಿಗಳಲ್ಲಿ ಪ್ರವೀಣ್ ನೆಟ್ಟಾರು ಒಬ್ಬನಾಗಿದ್ದ ಎಂದು ಚಾರ್ಜ್ ಶೀಟ್ನಲ್ಲಿ ಎನ್ಐಎ ಉಲ್ಲೇಖಿಸಿತ್ತು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ ಎನ್‌ಐಎ