ಚಿಕ್ಕಮಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನವರಿಗೆ ಸೋಲು ಕಟ್ಟಿಟ್ಟ ಬುತ್ತಿ ಅಂತ ಗೊತ್ತಿದೆ. ಸೋಲುವುದಕ್ಕೆ ಅವರು ಯಾಕೆ ನಿಲ್ತಾರೆ ಎಂದು ಮಾಜಿ ಸಚಿವ ಸಿ ಟಿ ರವಿ ಗೇಲಿ ಮಾಡಿದರು.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೊದಲು ಮಕ್ಕಳು-ಮಂತ್ರಿಗಳನ್ನು ನಿಲ್ಲಿಸೋದಕ್ಕೆ ಯೋಚನೆ ಮಾಡುತ್ತಿದ್ದರು. ಈಗ ಮಕ್ಕಳು-ಮಂತ್ರಿಗಳು ಎಲ್ಲರೂ ಸಹ ಚುನಾವಣೆಗೆ ನಿಲ್ಲಲು ಹಿಂದೇಟು ಹಾಕ್ತಿದ್ದಾರೆ. ನಾವು ರಾಜ್ಯ ಬಿಟ್ಟು ಹೋಗಲ್ಲ ಅಂತಿದ್ದಾರೆ. ಸೋಲ್ತೀವಿ ಅಂತ ಗೊತ್ತು, ಸೋಲೋದಕ್ಕೆ ಏಕೆ ನಿಲ್ತಾರೆ ಎಂದು ಟೀಕಿಸಿದರು.
ಈಗ ಸಿದ್ದರಾಮಯ್ಯನವರು ಸಿಎಂ ಆಗಿದ್ದಾರೆ, ಮೇಜಾರಿಟಿ ಇದೆ, ಯಾರನ್ನ ಬೇಕಾದ್ರು ಮಾಡ್ಕೊಳ್ಳಿ, ಮುಖ್ಯಮಂತ್ರಿ ಕಾಲೆಳೆಯುತ್ತಿರೋದು ಯಾರು, ನಾವಾ? ದಲಿತ ಸಿಎಂ ಹುಟ್ಟು ಹಾಕಿದ್ದು, ನೆಕ್ಸ್ಟ್ ಸಿಎಂ ಡಿಕೆಶಿ ಅಂದವರು ಯಾರು, ಎಲ್ಲಾ ಅವ್ರೆ ಎಂದು ಸಿ ಟಿ ರವಿ ಹೇಳಿದರು.
ರಾಜ್ಯದಲ್ಲಿ ಬರ ಇದೆ, ಬರದಿಂದ ಜನ ಕಂಗಾಲಾಗಿದ್ದು, ಕುಡಿಯೋಕೆ ನೀರಿಲ್ಲ. ಅವನು ಸಿಎಂ, ಇವನು ಸಿಎಂ ಅನ್ನೋದು ಬಿಟ್ಟು ಜನರಿಗೆ ಕುಡಿಯೋಕೆ ನೀರು ಕೊಡಿ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ, ಮೊದಲು ಅದನ್ನು ತಡೆಯಿರಿ, ದನಕರುಗಳಿಗೆ ಕುಡಿಯೋಕೆ ನೀರಿಲ್ಲ, ಮೇವಿಲ್ಲ. ಮೊದಲು ಆ ಕೆಲಸ ಮಾಡಿ, ಜನ ಕಷ್ಟದಲ್ಲಿದ್ದಾಗ ನಾನು ಸಿಎಂ, ನಾನು ಸಿಎಂ ಅಂತ ಕಿತ್ತಾಡೋಕೆ ಆಗುತ್ತಾ ಎಂದು ಕಾಂಗ್ರೆಸ್ ನಾಯಕರನ್ನು ಸಿ ಟಿ ರವಿ ಕುಟುಕಿದರು.
ಕಾಂಗ್ರೆಸ್ಸಿಗರು ಜಾತ್ಯತೀತರಾ?: ''ಕಾಂಗ್ರೆಸ್ಸಿಗರು ನಿಜವಾಗಲೂ ಜಾತ್ಯತೀತರಾ? ನಿಜವಾದ ಜಾತ್ಯತೀತರಾಗಿದ್ರೆ ಹುಂಡಿ ಕಳ್ಳರಾಗ್ತಿರ್ಲಿಲ್ಲ. ಹೆಸ್ರಲ್ಲಿ ರಾಮ - ಕೃಷ್ಣ- ಶಿವ ಇದ್ದಾನೆ ಅನ್ನೋದು ನಿಜವಾಗಿದ್ರೆ ಭಕ್ತರ ಹುಂಡಿಗೆ ಕೈ ಹಾಕ್ತಿರ್ಲಿಲ್ಲ. ಅಲ್ರೀ ಇವ್ರು ಹುಂಡಿ ಹಣಕ್ಕೂ ಕೈ ಹಾಕ್ತಾರಲ್ರಿ, ಜಾತ್ಯತೀತತೆ ಅಂದ್ರೆ ದೇವಸ್ಥಾನದ ಹುಂಡಿಗೆ ಮಾತ್ರ ಕೈ ಹಾಕೋದಾ?. ನಿಜವಾದ ಜಾತ್ಯತೀತರಾಗಿದ್ದರೆ ಮಸೀದಿ-ಚರ್ಚ್-ಮಂದಿರದಲ್ಲೂ 10% ಅಂತಿದ್ರು. ಮಸೀದಿ-ಚರ್ಚ್ ಬಿಟ್ಟು ಮಂದಿರದ ಹಣಕ್ಕೆ ಕೈ ಹಾಕಿದ್ದಾರೆ'' ಎಂದು ಸಿ ಟಿ ರವಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂಓದಿ:ನಮ್ಮ ಕುಟುಂಬದಿಂದ ಯಾರೂ ಲೋಕಸಭೆಗೆ ಸ್ಪರ್ಧಿಸುವುದಿಲ್ಲ: ಸಚಿವ ಸತೀಶ್ ಜಾರಕಿಹೊಳಿ